ಕಿಶ್ತ್ವಾರ್: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ನ ಚತ್ರು ಪ್ರದೇಶದಲ್ಲಿ ಪ್ರಮುಖ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ನಡೆಯುತ್ತಿದ್ದು, ಇದುವರೆಗೆ ಮೂವರು ಭಯೋತ್ಪಾದಕರನ್ನು ಭಾರತೀಯ ಭದ್ರತಾ ಪಡೆಗಳು ತಟಸ್ಥಗೊಳಿಸಿವೆ.
ಏಪ್ರಿಲ್ 10 ರಂದು ಕಾರ್ಯಾಚರಣೆ ಪ್ರಾರಂಭವಾಗಿದ್ದು, ಭದ್ರತಾ ಪಡೆಗಳು ಆ ಪ್ರದೇಶದಲ್ಲಿ ಉಗ್ರರನ್ನು ಎದುರಿಸಿದಾಗ, ಒಬ್ಬ ಭಯೋತ್ಪಾದಕನನ್ನು ಹೊಡೆದುರುಳಿಸಲಾಗಿದೆ. ಮರುದಿನ ಅವನ ಶವವನ್ನು ವಶಪಡಿಸಿಕೊಳ್ಳಲಾಯಿತು.
ನಂತರ ಏಪ್ರಿಲ್ 11 ರಂದು ಮಧ್ಯಾಹ್ನ ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು(SOG) ನೇತೃತ್ವದಲ್ಲಿ ತೀವ್ರಗೊಂಡ ಶೋಧ ಕಾರ್ಯಾಚರಣೆಯ ಸಮಯದಲ್ಲಿ ಹೊಸ ಎನ್‌ಕೌಂಟರ್ ನಡೆಯಿತು. ನಂತರದ ಗುಂಡಿನ ಚಕಮಕಿಯಲ್ಲಿ ಇನ್ನೂ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ.
ಈ ಪ್ರದೇಶದಲ್ಲಿ ನಿರಂತರ ಮಳೆಯ ಹೊರತಾಗಿಯೂ, ಭದ್ರತಾ ಪಡೆಗಳು ಕಾರ್ಯಾಚರಣೆ ಮುಂದುವರೆಸಿವೆ. ಇತ್ತೀಚಿನ ದಿನಗಳಲ್ಲಿ ಕಿಶ್ತ್ವಾರ್‌ನಲ್ಲಿ ನಡೆದ ಅತಿದೊಡ್ಡ ಕಾರ್ಯಾಚರಣೆಗಳಲ್ಲಿ ಇದು ಒಂದಾಗಿದ್ದು, ಈ ಪ್ರದೇಶದಲ್ಲಿನ ಉಗ್ರಗಾಮಿ ಚಟುವಟಿಕೆಗೆ ಗಮನಾರ್ಹ ಹೊಡೆತ ಎಂದು ಪರಿಗಣಿಸಲಾಗಿದೆ.