ಬೆಂಗಳೂರು: ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಕಾರ್ಯಾಚಾರಣೆ ಮೂಲಕ ಪಾಕಿಸ್ತಾನ ಉಗ್ರರಿಗೆ ಪ್ರತ್ಯುತ್ತರ ನೀಡಿದ್ದು, ಭಾರತಪಾಕಿಸ್ತಾನ ನಡುವೆ ಯುದ್ಧದ ಕಾರ್ಮೋಡ ಆವರಿಸಿದೆ. ಉಭಯ ದೇಶಗಳ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಭಾರತೀಯ ಸೇನೆ ಸಕಲ ರೀತಿಯಲ್ಲಿಯೂ ಸಜ್ಜುಗೊಂಡಿದೆ. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ದೇಶಾದ್ಯಂತ ಯುದ್ಧದ ತಾಲೀಲಿಮು ನಡೆಸಲಾಗಿದೆ.
ಆಪರೇಷನ್ ಅಭ್ಯಾಸ್ ಹೆಸರಿನಲ್ಲಿ ಇಂದು ಮಧ್ಯಾಹ್ನ 3:58ರಿಂದ ದೇಶಾದ್ಯಂತ ಮಾಕ್ ಡ್ರಿಲ್ ನಡೆಸಲಾಗಿದ್ದು, ಯುದ್ಧದ ಸಂದರ್ಭದಲ್ಲಿ ನಾಗರಿಕರು ತಮ್ಮನ್ನು ತಾವು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು, ರಕ್ಷಣಾ ತಂಡಗಳು ಯಾವ ರೀತಿಯಲ್ಲಿ ಕ್ಷಣಾರ್ಧದಲ್ಲಿ ಕಾರ್ಯೋನ್ಮುಖವಾಗಬೇಕು ಎಂಬ ಬಗ್ಗೆ ತಾಲೀಮು ನಡೆಸಲಾಯಿತು. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೂ ಮಾಕ್ ಡ್ರಿಲ್ ನಡೆಸಲಾಗಿದ್ದು, ಮಧ್ಯಾಹ್ನ 3:58ರಿಂದ 4ಗಂಟೆಯವರೆಗೆ ಎರಡು ನಿಮಿಷಗಳ ಕಾಲ ಯುದ್ಧದ್ ಸೈರನ್ ಮೊಳಗಿತು. ಬಳಿಕ ವಿವಿಧ ಪೊಲೀಸ್ ಠಾಣೆ, ಆಸ್ಪತ್ರೆ, ಶಾಲಾ-ಕಾಲೇಜು, ಅಗ್ನಿಶಾಮಕ ಕಚೇರಿ ಸೇರಿದಂತೆ ಒಟ್ಟು 35 ಸ್ಥಳಗಳಲ್ಲಿ ಯುದ್ಧದ ಸಂದರ್ಭದ ಅಣುಕು ಪ್ರದರ್ಶನದ ಮೂಲಕ ತಾಲೀಮು ನಡೆಸಲಾಯಿತು.
ಈ ಮೂಲಕ ಯುದ್ಧದ ಸಂದರ್ಭವನ್ನು ದೇಶದ ಜನತೆ ಯಾವ ರೀತಿ ಎದುರಿಸಬೇಕು ಎಂಬುದನ್ನು ತಿಳಿಸುವ ಮೂಲಕ ಶತ್ರು ರಾಷ್ಟ್ರಕ್ಕೆ ಭಾರತೀಯ ಸೇನೆ ಸಕಲ ಸನ್ನದ್ಧವಾಗಿದೆ ಎಂಬ ಸಂದೇಶ ರವಾನಿಸಿತು.