ಕನಕದಾಸರು – ನಾರಾಯಣಗುರುಗಳ ಆದರ್ಶ ಕೇಳಿ ಎದ್ದು ಹೋಗಬಾರದು. ಜೀವನದಲ್ಲಿ ಪಾಲಿಸಬೇಕು: ಸಿದ್ಧರಾಮಯ್ಯ

ಬೆಂಗಳೂರು: ಕನಕದಾಸರು – ನಾರಾಯಣಗುರುಗಳ ಆದರ್ಶಗಳನ್ನು ಕೇವಲ ಕೇಳಿ ಎದ್ದು ಹೋಗಬಾರದು. ಅವುಗಳನ್ನು ಜೀವನದಲ್ಲಿ ಪಾಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ಮಲ್ಲತ್ತಳ್ಳಿಯ ಕಲಾಗ್ರಾಮದಲ್ಲಿ ನಡೆದ “ಕನಕ‌ ಕಾವ್ಯ ದೀವಿಗೆ” ಮೂರು ದಿನಗಳ ಕನಕ ಸಂಭ್ರಮ, ಸಂಸ್ಕೃತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

16ನೇ ಶತಮಾನದಲ್ಲೇ ಕನಕದಾಸರು ಜನಿಸಿದ್ದರು. ಪಾಳೇಗಾರರ ಕುಟುಂಬದಲ್ಲಿ ಜನಿಸಿದರೂ ಸಂತರಾದರು ಮಾತ್ರವಲ್ಲ ಕವಿ, ದಾರ್ಶನಿಕರು, ಸಾಮಾಜಿಕ ಹೋರಾಟಗಾರರೂ ಆಗಿದ್ದರು. ಸಮಾಜದ ಅಸಮಾನತೆ ವಿರುದ್ಧ ಬಂಡಾಯ ಹೂಡಿದರು. ಬುದ್ದ, ಬಸವ, ನಾರಾಯಣಗುರು, ಕನಕದಾಸರು ಜಾತಿ ವ್ಯವಸ್ಥೆ, ವರ್ಗ ವ್ಯವಸ್ಥೆ ಹೋಗಲಾಡಿಸಲು ಶ್ರಮಿಸಿದರು ಎಂದರು.

ಯಾವ ದೇವಸ್ಥಾನಕ್ಕೆ ನಿಮ್ಮನ್ನು ಬಿಡುವುದಿಲ್ಲವೋ ಆ ದೇವಸ್ಥಾನಕ್ಕೆ ಹೋಗಬೇಡಿ. ನಿಮ್ಮದೇ ದೇವರುಗಳಿಗೆ ನಿಮ್ಮದೇ ದೇವಸ್ಥಾನ ಕಟ್ಟಿಸಿ ಎಂದು ನಾರಾಯಣ ಗುರುಗಳು ಕರೆ ನೀಡಿದ್ದರು. ನಿಮ್ಮನ್ನು ಯಾವ ದೇವಸ್ಥಾನಕ್ಕೆ ಸೇರಿಸುವುದಿಲ್ಲವೋ ಆ ದೇವಸ್ಥಾನಕ್ಕೆ ಹೋಗಿ ಇಣುಕುವ ಅಗತ್ಯ ಏನಿದೆ? ಹೊರಗೇ ನಿಂತು ಕೈ ಮುಗಿಯುವುದಕ್ಕಿಂತ ನಿಮ್ಮದೇ ಗುಡಿ ನಿರ್ಮಿಸಿ ಎನ್ನುವ ನಾರಾಯಣ ಗುರುಗಳ ಆದರ್ಶ ಪಾಲನೆ ಆಗಬೇಕು ಎಂದರು.

16ನೇ ಶತಮಾನದಲ್ಲಿ ಕನಕದಾಸರು ಕುಲ ಕುಲ ಕುಲ ಎಂದು ಬಡಿದಾಡದಿರಿ ಎಂದರು. 12ನೇ ಶತಮಾನಲ್ಲಿ ಬಸವಣ್ಣನವರು ಇವನಾರವ, ಇವನಾರವ ಎನ್ನದಿರಿ, ಇವ ನಮ್ಮವ ಎಂದೆಣಿಸಯ್ಯಾ ಎಂದು ಹೇಳಿದರು. ಆದರೂ ಇವತ್ತಿಗೂ ಕುಲ ಮತ್ತು ಇವನಾರವ ಎನ್ನುವ ಜಾತಿ ತಾರತಮ್ಯ ಆಚರಣೆಯಲ್ಲಿದೆ ಎಂದರು.

ಜಾತಿ ವ್ಯವಸ್ಥೆಗೆ ಪಟ್ಟಭದ್ರರು ಇನ್ನೂ ನೀರೆರೆಯುತ್ತಲೇ ಇದ್ದಾರೆ. ಹೀಗಾಗಿ ಸಮಾಜದ ಬದಲಾವಣೆಗೆ ಧೈರ್ಯ ಬೇಕಾಗುತ್ತದೆ. ವೈಜ್ಞಾನಿಕತೆ, ವೈಚಾರಿಕತೆಯ ಶಕ್ತಿಯಿಂದ ಸಮಾಜದ ಅಸಮಾನತೆ ಅಳಿಯಲು ಸಾಧ್ಯ. ಕನಕದಾಸರ ರಾಮಧಾನ್ಯ ಚರಿತೆ, ಬಸವಣ್ಣನವರ ಕಾಯಕ – ದಾಸೋಹ ಎರಡೂ ಶ್ರಮಿಕ ಸಂಸ್ಕೃತಿಯನ್ನು, ಕಾಯಕ ಮಾಡಿ ಬದುಕುವುದನ್ನು ಸಾರುತ್ತದೆ. ಹೀಗಾಗಿ ಕನಕ, ಬಸವರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಮಾತ್ರವಲ್ಲ, ಜೀವನದಲ್ಲಿ ಇವರ ಆದರ್ಶಗಳನ್ನು ಪಾಲಿಸಬೇಕು ಎಂದರು.

ಸಚಿವ ಶಿವರಾಜ್ ತಂಗಡಗಿ, ಶಾಸಕರಾದ ಮುನಿರತ್ನ, ಕೋನರೆಡ್ಡಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ. ರೇವಣ್ಣ ಇತರರು ಇದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read