ಮೈಸೂರು : ಮೈಸೂರು ದಸರಾ ಉದ್ಘಾಟಿಸಲು ನಾಳೆ ಸಂಜೆ 4 ಗಂಟೆಗೆ ಬಾನು ಮುಷ್ತಾಕ್ ಗೆ ಮೈಸೂರು ಜಿಲ್ಲಾಡಳಿತ ಅಧಿಕೃತ ಆಹ್ವಾನ ನೀಡಲಿದೆ.
ಹೌದು , ಈ ಬಾರಿ ಲೇಖಕಿ ಬಾನು ಮುಷ್ತಾಕ್ ‘ಮೈಸೂರು ದಸರಾ’ ಉದ್ಘಾಟಿಸಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಅಂತೆಯೇ ರಾಜ್ಯ ಸರ್ಕಾರದ ಪರವಾಗಿ ಮೈಸೂರು ಜಿಲ್ಲಾಡಳಿತ ನಾಳೆ ಸಂಜೆ ಬಾನು ಮುಷ್ತಾಕ್ ಮನೆಗೆ ಭೇಟಿ ನೀಡಿ ದಸರಾ ಉದ್ಘಾಟನೆಗೆ ಆಹ್ವಾನ ನೀಡಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥನೆ
ದಸರಾ ನಾಡಹಬ್ಬ ಹಾಗಾಗಿ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ದಸರಾ ನಾಡ ಹಬ್ಬವಾಗಿರುವುದರಿಂದ ಇಂಥವರೇ ಉದ್ಘಾಟನೆ ಮಾಡಬೇಕು ಅಂತೇನೂ ಇಲ್ಲ. ಎಲ್ಲರೂ ಸೇರಿ ದಸರಾವನ್ನು ಆಚರಣೆ ಮಾಡಬೇಕು ನಾಡ ಹಬ್ಬ ಎಲ್ಲರಿಗೂ ಸೇರಿದ್ದು ಎಂದು ಹೇಳಿದರು.ಹೈದರಾಲಿ, ಟಿಪ್ಪು ದಸರಾ ಆಚರಣೆ ಮಾಡಿರಲಿಲ್ಲವೇ? ಮಿರ್ಜಾ ಇಸ್ಮಾಯಿಲ್ ದಿವಾನರಾಗಿರಲಿಲ್ಲವೇ? ಇದು ಧರ್ಮಾತೀತ ಹಾಗೂ ಜಾತ್ಯಾತೀತವಾದ ಹಬ್ಬ. ದಸರಾ ಸಾಂಸ್ಕೃತಿಕವಾಗಿ ಮಾಡುವ ನಾಡಹಬ್ಬ. ಹಾಗಾಗಿ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ರನ್ನು ದಸರಾ ಉದ್ಘಾತನೆಗೆ ಆಹ್ವಾನಿಸಲಾಗಿದೆ ಎಂದು ಹೇಳಿದರು.
ಬಾನು ಮುಷ್ತಾಕ್ ಯಾರು..?
ಬಾನು ಮುಷ್ತಾಕ್ (ಜನನ ಏಪ್ರಿಲ್ 3, 1948) ಕರ್ನಾಟಕದ ಒಬ್ಬ ಭಾರತೀಯ ಕನ್ನಡ ಭಾಷೆಯ ಬರಹಗಾರ್ತಿ, ಕಾರ್ಯಕರ್ತೆ ಮತ್ತು ವಕೀಲೆ . ದೀಪಾ ಭಸ್ತಿ ಅನುವಾದಿಸಿದ ಅವರ ಸಣ್ಣ ಕಥೆಗಳ ಆಯ್ದ ಭಾಗವಾದ ಹಾರ್ಟ್ ಲ್ಯಾಂಪ್ಗೆ ಅವರು ಹೆಚ್ಚು ಹೆಸರುವಾಸಿಯಾಗಿದ್ದಾರೆ , ಈ ಪುಸ್ತಕವು 2025 ರಲ್ಲಿ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಗೆದ್ದಿದೆ.