ಪುರಿ: ಒಡಿಶಾದ ಪುರಿ ಜಿಲ್ಲೆಯಲ್ಲಿ ಅಪರಿಚಿತ ದುಷ್ಕರ್ಮಿಗಳಿಂದ ಸುಟ್ಟು ಕರಕಲಾದ 15 ವರ್ಷದ ಬಾಲಕಿಯನ್ನು ಇಂದು ದೆಹಲಿ ಏಮ್ಸ್‌ಗೆ ಸಾಗಿಸಲಾಗುವುದು ಎಂದು ಏಮ್ಸ್ ಭುವನೇಶ್ವರ ನಿರ್ದೇಶಕರು ತಿಳಿಸಿದ್ದಾರೆ.
ಸಂತ್ರಸ್ತೆ ಪ್ರಸ್ತುತ ಏಮ್ಸ್ ಭುವನೇಶ್ವರದಲ್ಲಿ ಶೇಕಡಾ 70 ರಷ್ಟು ಸುಟ್ಟಗಾಯಗಳೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಏಮ್ಸ್ ಭುವನೇಶ್ವರ ನಿರ್ದೇಶಕರ ಪ್ರಕಾರ, ಬಾಲಕಿಯ ಸ್ಥಿತಿ ಪ್ರಸ್ತುತ ಸ್ಥಿರವಾಗಿದೆ, ಆಕೆಯ ರಕ್ತದೊತ್ತಡ, ಯಕೃತ್ತು ಮತ್ತು ಮೂತ್ರಪಿಂಡದ ಕಾರ್ಯಗಳಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿದೆ. ಆಕೆಯ ವರ್ಗಾವಣೆಯ ಸಮಯದಲ್ಲಿ ಬಾಲಕಿಯ ಜೊತೆ ಹೋಗಲು ದೆಹಲಿ ಏಮ್ಸ್‌ನಿಂದ ವೈದ್ಯರ ತಂಡ ಆಗಮಿಸಲಿದೆ ಮತ್ತು ಕುಟುಂಬದ ಸದಸ್ಯರು ಸಹ ಅವರೊಂದಿಗೆ ಪ್ರಯಾಣಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ನಾವು ರೋಗಿಯನ್ನು ದೆಹಲಿಯ ಏಮ್ಸ್‌ಗೆ ಸ್ಥಳಾಂತರಕ್ಕೆ ಯೋಜಿಸುತ್ತಿದ್ದೇವೆ. ಬಹುಶಃ 2-2.5 ಗಂಟೆಗಳಲ್ಲಿ ಅವರನ್ನು ಸ್ಥಳಾಂತರಿಸಲಾಗುವುದು. ವಿಶೇಷ ಚಾರ್ಟರ್ಡ್ ವಿಮಾನದ ಮೂಲಕ ಅವರನ್ನು ಸ್ಥಳಾಂತರಿಸಲಾಗುತ್ತದೆ. ಇದನ್ನು ಈಗಾಗಲೇ ದೆಹಲಿಯ ಏಮ್ಸ್‌ಗೆ ತಿಳಿಸಲಾಗಿದೆ.
ಈ ಹಿಂದೆ, ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಜ್ಹಿ ಅವರು ವೈದ್ಯರ ಸಲಹೆಯ ಮೇರೆಗೆ ರಾಜ್ಯ ಸರ್ಕಾರವು ಅಪ್ರಾಪ್ತ ಬಾಲಕಿಯನ್ನು ದೆಹಲಿಯ ಏಮ್ಸ್‌ಗೆ ಸುಧಾರಿತ ವೈದ್ಯಕೀಯ ಆರೈಕೆಗಾಗಿ ಸ್ಥಳಾಂತರಿಸಲಿದೆ ಎಂದು ಹೇಳಿದ್ದರು.