ಬೆಂಗಳೂರು: ಹಳೆ ಪಿಂಚಣಿ ಯೋಜನೆ ನಿರೀಕ್ಷೆಯಲ್ಲಿರುವ ಸರ್ಕಾರಿ ನೌಕರರಿಗೆ ಶಿವರಾತ್ರಿ ಹಬ್ಬದಲ್ಲೇ ಶುಭ ಸುದ್ದಿ ಸಿಕ್ಕಿದೆ.
ಎನ್.ಪಿ.ಎಸ್. ವ್ಯಾಪ್ತಿಯಲ್ಲಿರುವ ಸರ್ಕಾರಿ ನೌಕರರನ್ನು ಒಪಿಎಸ್ ಗೆ ಒಳಪಡಿಸಬೇಕೆಂದು ಹೋರಾಟ ನಡೆಯುತ್ತಿದೆ. ಇದೇ ವೇಳೆ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಎನ್‌ಪಿಎಸ್ ನಿಂದ ಒಪಿಎಸ್ ವ್ಯಾಪ್ತಿಗೆ ಬಂದಿರುವ 13,500 ನೌಕರರಿಗೆ ಒಪಿಎಸ್ ಸೌಲಭ್ಯ ಪಡೆಯಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
50 ವರ್ಷ ಮೀರದ ಎಲ್ಲಾ ಸರ್ಕಾರಿ ಅಧಿಕಾರಿ ಮತ್ತು ನೌಕರರಿಗೆ ಏಳನೇ ವೇತನ ಶ್ರೇಣಿಗೆ ಅನುಗುಣವಾಗಿ ಕನಿಷ್ಠ ವಿಮಾ ಕಂತನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ. ಕಡ್ಡಾಯವಾಗಿ ವಿಮಾ ಕಂತನ್ನು ಅಪ್ಡೇಟ್ ಮಾಡಲು ಗಡುವು ನೀಡಲಾಗಿದೆ.
2006ರ ಏಪ್ರಿಲ್ ಪೂರ್ವ ನೇಮಕಾತಿ ಅಧಿಸೂಚನೆಯಾಗಿ ನಂತರ ನೇಮಕವಾಗಿರುವ 13500 ನೌಕರರನ್ನು ಎನ್‌ಪಿಎಸ್ ನಿಂದ ಒಪಿಎಸ್ ವ್ಯಾಪ್ತಿಗೆ ಒಳಪಡಿಸಿ 2024ರ ಜನವರಿ 1ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಸುಪ್ರೀಂಕೋರ್ಟ್ ತೀರ್ಪಿನ ಮೇಲೆ ಕೇಂದ್ರ ಸರ್ಕಾರ ಹೊರಡಿಸಿದ ಆದೇಶದ ಮೇಲೆ ರಾಜ್ಯ ಸರ್ಕಾರ ನೌಕರರನ್ನು ಒಪಿಎಸ್ ಗೆ ಒಳಪಡಿಸಿದೆ.
ಇಲಾಖಾ ಮುಖ್ಯಸ್ಥರ ದೃಡೀಕರಣ ಪತ್ರ ಕೊಡಬೇಕು. ಎನ್ಪಿಎಸ್‌ಗೆ ಒಳಪಡಲ್ಲ ಎನ್ನುವ ದೃಡೀಕರಣ ನೀಡಬೇಕು. ಎನ್‌ಪಿಎಸ್ ವಂತಿಗೆ ಕಡಿತ ತಕ್ಷಣ ಸ್ಥಗಿತವಾಗಬೇಕು. ಜಿಪಿಎಫ್ ವಿವರ ನೀಡಬೇಕು ಎಂಬುದು ಸೇರಿದಂತೆ ಪ್ರಮುಖ ಸೂಚನೆಗಳನ್ನು ನೀಡಿ 13500 ನೌಕರರು ಒಪಿಎಸ್ ಸೌಲಭ್ಯ ಪಡೆಯಲು ಒಪ್ಪಿಗೆ ನೀಡಲಾಗಿದೆ.
ಆದರೆ 2006ಕ್ಕಿಂತ ಮುಂಚೆ ನೇಮಕವಾದ 2.45 ಲಕ್ಷ ನೌಕರರು ರಾಜ್ಯದಲ್ಲಿದ್ದು, ಅವರನ್ನು ಎನ್‌ಪಿಎಸ್ ನಿಂದ ಒಪಿಎಸ್ ವ್ಯಾಪ್ತಿಗೆ ಒಳಪಡಿಸಬೇಕೆಂದು ಸರ್ಕಾರಿ ನೌಕರರ ಹೋರಾಟ ಮುಂದುವರೆದಿದೆ.