ಬೆಂಗಳೂರು: ಹಾಲಿನ ದರ ಹೆಚ್ಚಳಕ್ಕೆ ಯಾವುದೇ ಪ್ರಸ್ತಾವನೆ ಸಲ್ಲಿಸಿಲ್ಲ ಎಂದು ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ಹೇಳಿದ್ದಾರೆ.
ಸುದ್ದಿಗರೊಂದಿಗೆ ಮಾತನಾಡಿದ ಅವರು, ಹಾಲು ಮಾರಾಟದಿಂದ ಆಗುತ್ತಿರುವ ನಷ್ಟದ ಬಗೆ ಕೆಎಂಎಫ್ ಗೆ ಮನವಿ ಮಾಡಲಾಗಿದೆ. ಹಾಲಿನ ದರ ಏರಿಕೆ ಬಗ್ಗೆ ಯಾವುದೇ ಪ್ರಸ್ತಾವನೆ ಸಲ್ಲಿಸಿಲ್ಲ ಎಂದು ತಿಳಿಸಿದ್ದಾರೆ.
ಹಾಲು ಮಾರಾಟದಿಂದ ಒಕ್ಕೂಟಕ್ಕೆ ಆಗುತ್ತಿರುವ ನಷ್ಟದ ಬಗ್ಗೆ ತಿಳಿಸಲಾಗಿದೆ. ಪ್ರತಿ ಲೀಟರ್ ಹಾಲಿಗೆ 20 ಪೈಸೆಯಿಂದ 1.20 ರೂಪಾಯಿವರೆಗೆ ನಷ್ಟವಾಗುತ್ತಿದೆ. ಬಮುಲ್ ನಿಂದ ಐದು ಪ್ರಕಾರದ ಹಾಲು ಮಾರಾಟ ಮಾಡಲಾಗುತ್ತದೆ. ಅದರಲ್ಲಿ ಒಂದೊಂದು ರೀತಿಯ ಹಾಲಿನಿಂದ ಒಂದೊಂದು ರೀತಿ ನಷ್ಟವಾಗುತ್ತಿದೆ. ಅರ್ಧ ಲೀಟರ್ ಹಾಲಿನ ಮಾರಾಟದಿಂದ ಲಾಭವಾಗುತ್ತಿದೆ. ಒಂದು ಲೀಟರ್ ಗಿಂತ ಹೆಚ್ಚಿನ ಪ್ರಮಾಣದ ಹಾಲು ಮಾರಾಟದಿಂದ ನಷ್ಟವಾಗುತ್ತಿದೆ. ಅರ್ಧ ಲೀಟರ್ ಹಾಲಿಗೆ 26 ರೂ., ಒಂದು ಲೀಟರ್ ಹಾಲಿಗೆ 48 ರೂಪಾಯಿ ಇದೆ. ಈ ಹಿಂದೆ ದರ ಹೆಚ್ಚಳದ ವೇಳೆ ಸರಿಯಾಗಿ ಲೆಕ್ಕ ಹಾಕಿ ಸರ್ಕಾರಕ್ಕೆ ಮಾಹಿತಿ ನೀಡದ ಕಾರಣ ನಷ್ಟವಾಗುತ್ತಿದೆ ಎಂದು ಹೇಳಿದ್ದಾರೆ.
