ಹಾಸನ : ಮಾಧ್ಯಮಗಳಲ್ಲಿ ಆ.16 ರಿಂದ ಸ್ವಾತಂತ್ರ್ಯ ದಿನಾಚರಣೆಯ ಆಚರಣೆಗೆ ಸಂಬಂಧಿಸಿದಂತೆ ಸುದ್ದಿ ಪ್ರಸಾರವಾಗುತ್ತಿದ್ದು ಇದರಲ್ಲಿ ಬೇಲೂರು ಅಂಚೆ ಇಲಾಖೆ ನೌಕರರು ಅಂಚೆ ಕಚೇರಿಯಲ್ಲಿಯೇ ಮಾಂಸದ ಅಡುಗೆ ಮಾಡಿ, ಡಿಜೆ ನೃತ್ಯ ಮಾಡಿರುತ್ತಾರೆ ಎಂದು ಪ್ರಸಾರ ಮಾಡಲಾಗಿರುತ್ತದೆ. ಈ ಬಗ್ಗೆ ಅಂಚೆ ಇಲಾಖೆಯ ಅಧಿಕಾರಿಗಳಿಂದ ಇಲಾಖಾ ಮಟ್ಟದಲ್ಲಿ ತನಿಖೆಯನ್ನು ಕೈಗೊಂಡಿದ್ದು ಪ್ರಾಥಮಿಕ ವರದಿಯ ಪ್ರಕಾರ ಆ ದಿನ ಸ್ವಾತಂತ್ರ‍್ಯ ದಿನಾಚರಣೆಯನ್ನು ಧ್ವಜಾರೋಹಣೆಯ ಮೂಲಕ ಆಚರಿಸಿ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗಿದೆ.
ಸ್ವಾತಂತ್ರೋತ್ಸವದ ಪ್ರಯುಕ್ತ ಪಲಾವ್ ಮತ್ತು ಕೇಸರಿಬಾತ್ ಅನ್ನು ಅಂಚೆ ಮನರಂಜನ ಕೊಠಡಿಯಲ್ಲಿ ತಯಾರಿಸಿ ಎಲ್ಲರಿಗೂ ವಿತರಿಸಲಾಗಿದೆ. ಕಾರ್ಯಕ್ರಮದ ಕೊನೆಯಲ್ಲಿ ಕುಲದಲ್ಲಿ ಕೀಳ್ಯಾವುದೋ ಗೀತೆಗೆ ಕೆಲ ನೌಕರರು ನೃತ್ಯ ಮಾಡಿದ್ದು ಈ ಎಲ್ಲಾ ಚಟುವಟಿಕೆಗಳು ಅಂಚೆ ಕಚೇರಿಯಲ್ಲಿ ನಡೆದಿರುವುದಿಲ್ಲ ಬದಲಾಗಿ ಅಂಚೆ ಮನರಂಜನಾ ಕೊಠಡಿಯಲ್ಲಿ ನಡೆದಿರುತ್ತದೆ ಆದರೆ ಮಾಧ್ಯಮಗಳಲ್ಲಿ ಬೇಲೂರು ಅಂಚೆ ಕಚೇರಿಯಲ್ಲಿಯೇ ನಡೆದಿದೆಯೆಂದು ತಪ್ಪಾಗಿ ಪ್ರಸಾರ ಮಾಡಲಾಗಿರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಅಂಚೆ ಕಚೇರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪರಿಶೀಲಿಸಿದ್ದು ಸಂಗ್ರಹಿಸಲಾಗಿದೆ. ಆದ್ದರಿಂದ ಈ ಹಿಂದೆ ಪ್ರಸಾರವಾದ ವಿಷಯಗಳು ಸುಳ್ಳು ಸುದ್ದಿಗಳಾಗಿದ್ದು ಅಂಚೆ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಯಾವುದೇ ರೀತಿಯ ಬಾಡೂಟ ಮತ್ತು ಮದ್ಯಪಾನದ ಪಾರ್ಟಿ ಮಾಡಿರುವುದಿಲ್ಲವೆಂದು ಹಾಸನ ಅಂಚೆ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.