ಬೆಳಗಾವಿ: ಡಿ.ಕೆ. ಶಿವಕುಮಾರ್ ಅಲ್ಲ, ಸತೀಶ್ ಜಾರಕಿಹೊಳಿ ಅವರೂ ಅಲ್ಲ, ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಕಾಂಗ್ರೆಸ್ ನಲ್ಲಿ ಸಿಎಂ ಸ್ಪರ್ಧೆಯಲ್ಲಿರುವ ಯಾವ ನಾಯಕರೂ ಮುಖ್ಯಮಂತ್ರಿ ಆಗುವುದಿಲ್ಲ. ರಾಜ್ಯದ ಸಾರಥ್ಯ ಬ್ಲಾಕ್ ಹಾರ್ಸ್ ಕೈಗೆ ಸಿಗಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೇಳಿದ್ದಾರೆ.
ಡಿಕೆಶಿ ಮುಖ್ಯಮಂತ್ರಿ ಆಗಲ್ಲ, ಸತೀಶ್ ಜಾರಕಿಹೊಳಿ ಕೂಡ ಮುಖ್ಯಮಂತ್ರಿ ಆಗುವುದಿಲ್ಲ. ಒಮ್ಮೆ ಸಿಎಂ ಆಗಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಕಾಯುತ್ತಿದ್ದಾರೆ. ನಾಯಕತ್ವ ಬದಲಾವಣೆ ಆಗಲಿದೆ. ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗಲಿದ್ದಾರೆ. ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಿದರೆ ಸಿದ್ದರಾಮಯ್ಯ ಸತೀಶ್ ಜಾರಕಿಹೊಳಿ ಪರ ನಿಲ್ಲುತ್ತಾರೆ. ಹೀಗಾಗಿ ತಮ್ಮ ಪುತ್ರನ ಮೂಲಕ ಸಂದೇಶ ಕಳುಹಿಸಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ.
ವಿಜಯೇಂದ್ರ ಮತ್ತೆ ಬಿಜೆಪಿ ಅಧ್ಯಕ್ಷರಾದರೆ ನಾನು ಹೊಸ ಪಕ್ಷ ಕಟ್ಟುತ್ತೇನೆ. ಜೆಡಿಎಸ್, ಕಾಂಗ್ರೆಸ್, ಬಿಜೆಪಿ ನವರನ್ನು ಸೇರಿಸಿಕೊಂಡು ಜೆಸಿಬಿ ಹೆಸರಿನಲ್ಲಿ ಹೊಸ ಪಕ್ಷ ಕಟ್ಟುತ್ತೇನೆ. ಈಗಾಗಲೇ ಬೈಲಾ ಸೇರಿ ಎಲ್ಲಾ ರೆಡಿಯಾಗಿದೆ ಎಂದು ಹೇಳಿದ್ದಾರೆ.
