ಬೆಂಗಳೂರು: ಈಗಾಗಲೇ 12 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ಶಂಕಾಸ್ಪದ ಎಂದು ಗುರುತಿಸಿದ ರಾಜ್ಯ ಆಹಾರ ಇಲಾಖೆ ಮಾನದಂಡ ಉಲ್ಲಂಘಿಸಿ ಪಡೆದುಕೊಂಡ ಅನರ್ಹ ಬಿಪಿಎಲ್ ಕಾರ್ಡ್ ದಾರರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.
ನೋಟಿಸ್ ತಲುಪಿದ ಮೂರು ದಿನದೊಳಗೆ ಅಗತ್ಯ ದಾಖಲೆಗಳೊಂದಿಗೆ ಲಿಖಿತ ಉತ್ತರ ನೀಡಬೇಕು. ಸಮರ್ಪಕ ಉತ್ತರ ನೀಡದಿದ್ದರೆ ಕಾನೂನು ಕ್ರಮದ ಜತೆಗೆ ದುರುಪಯೋಗಪಡಿಸಿಕೊಂಡಿದ್ದ ಪಡಿತರದ ಬಾಬ್ತಿನ ಪ್ರಮಾಣವನ್ನು ಮುಕ್ತ ಮಾರುಕಟ್ಟೆ ದರದಲ್ಲಿ ಲೆಕ್ಕ ಹಾಕಿ ವಸೂಲಿ ಮಾಡಲಾಗುವುದು ಎಂದು ಆಹಾರ ಇಲಾಖೆ ಅನರ್ಹ ಫಲಾನುಭವಿಗಳಿಗೆ ಎಚ್ಚರಿಕೆ ನೀಡಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನ್ವಯ ಬಿಪಿಎಲ್ ಕಾರ್ಡ್ ಹೊಂದಿದ ಫಲಾನುಭವಿಗಳನ್ನು ಗುರುತಿಸಲು ಸರ್ಕಾರ ಮಾನದಂಡ ನಿಗದಿಪಡಿಸಿದೆ. ಅಂತೆಯೇ ವಿವಿಧ ಇಲಾಖೆಯ ದತ್ತಾಂಶ ಪರಿಶೀಲಿಸಿದಾಗ ಮಾನದಂಡಕ್ಕೆ ವಿರುದ್ಧವಾದ ಶಂಕಾಸ್ಪದ ಬಿಪಿಎಲ್ ಕಾರ್ಡ್ ಗಳು ಪತ್ತೆಯಾಗಿದೆ. ಇಂತಹ ಕಾರ್ಡ್ ಗಳಿಗೆ ಪಡಿತರ ವಿತರಿಸದಂತೆ ನ್ಯಾಯಬೆಲೆ ಅಂಗಡಿಗಳಿಗೆ ಸೂಚನೆ ನೀಡಲಾಗಿದೆ. ಈ ತಿಂಗಳಿನಿಂದ ಶಂಕಾಸ್ಪದ ಕಾರ್ಡ್ ಫಲಾನುಭವಿಗಳಿಗೆ ಅಕ್ಕಿ ಹಂಚಿಕೆಯಾಗುವುದಿಲ್ಲ ಎನ್ನಲಾಗಿದೆ.