ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ನಿಖಿಲ್ ಕುಮಾರಸ್ವಾಮಿ ನೇಮಕ ಖಚಿತವಾಗಿದ್ದು, ಶೀಘ್ರವೇ ಈ ಕುರಿತ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.
ಸದ್ಯ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರೇ ರಾಜ್ಯಾಧ್ಯಕ್ಷರ ಹುದ್ದೆಯಲ್ಲಿ ಇದ್ದಾರೆ. ಪಕ್ಷದಲ್ಲಿ ಯಾರಾದರೂ ಹಿರಿಯ ನಾಯಕರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಕುರಿತಾಗಿ ಪರಿಶೀಲನೆ ನಡೆದಿದೆ. ಆದರೆ, ದೇವೇಗೌಡರ ಕುಟುಂಬದವರೇ ರಾಜ್ಯಾಧ್ಯಕ್ಷರಾದರೆ ಸಂಘಟನೆಗೆ ಅನುಕೂಲವಾಗುತ್ತದೆ ಎನ್ನುವ ಅಭಿಪ್ರಾಯಕ್ಕೆ ಬಂದಿದ್ದು, ನಿಖಿಲ್ ಕುಮಾರಸ್ವಾಮಿ ಅವರನ್ನು ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಲು ಚರ್ಚೆ ನಡೆದಿದೆ.
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹಲವು ಬಾರಿ ಯೋಚಿಸಿ ನಿಖಿಲ್ ಕುಮಾರಸ್ವಾಮಿ ಅವರನ್ನು ರಾಜ್ಯಾಧ್ಯಕ್ಷರಾಗಿ ನೇಮಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಪಕ್ಷದ ಶಾಸಕರು ಮತ್ತು ನಾಯಕರನ್ನು ಕೂಡ ಈ ಪ್ರಸ್ತಾವಕ್ಕೆ ಒಪ್ಪಿಸಿದ್ದಾರೆ ಎಂದು ಹೇಳಲಾಗಿದೆ.
ಕುಮಾರಸ್ವಾಮಿ ಕೇಂದ್ರ ಸಚಿವರಾದ ಸಂದರ್ಭದಲ್ಲಿ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ಇತ್ತು. ಆದರೆ ಕುಮಾರಸ್ವಾಮಿ ಅವರನ್ನೇ ಮುಂದುವರೆಸಬೇಕೆಂಬ ಒತ್ತಡ ಹಿನ್ನೆಲೆಯಲ್ಲಿ ಅವರೇ ಮುಂದುವರೆದಿದ್ದರು.
ಈಗ ಕೇಂದ್ರ ಸಚಿವರಾಗಿ ಕಾರ್ಯದೊತ್ತಡದ ನಡುವೆ ಪಕ್ಷ ಸಂಘಟನೆಗೆ ಸಮಯ ಕೊಡಲು ಕುಮಾರಸ್ವಾಮಿಗೆ ಸಾಧ್ಯವಾಗುತ್ತಿಲ್ಲ. ಶೀಘ್ರವೇ ಎದುರಾಗಲಿರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಬಿಬಿಎಂಪಿ ಸೇರಿ ವಿವಿಧ ಚುನಾವಣೆಗಳಿಗೆ ಪಕ್ಷವನ್ನು ಸಜ್ಜುಗೊಳಿಸಬೇಕಿದೆ. ಇದಕ್ಕೆ ಪೂರ್ಣ ಸಮಯ ನೀಡುವ ರಾಜ್ಯಾಧ್ಯಕ್ಷರ ಅವಶ್ಯಕತೆ ಇದೆ. ಹೀಗಾಗಿ ಎಲ್ಲಾ ದೃಷ್ಟಿಯಿಂದಲೂ ನಿಖಿಲ್ ಕುಮಾರಸ್ವಾಮಿ ಅವರನ್ನು ಮುಂಚೂಣಿಗೆ ತರುವುದು ಸೂಕ್ತವೆಂದು ಅಭಿಪ್ರಾಯಕ್ಕೆ ಬರಲಾಗಿದೆ.
2019ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರ, 2023ರಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರ, ಇತ್ತೀಚೆಗೆ ಚನ್ನಪಟ್ಟಣ ಉಪಚುನಾವಣೆಯಲ್ಲಿಯೂ ನಿಖಿಲ್ ಕುಮಾರ್ ಸ್ವಾಮಿ ಪರಾಭವಗೊಂಡಿದ್ದರು. ಯುವ ಜನತಾದಳ ಅಧ್ಯಕ್ಷರಾಗಿರುವ ನಿಖಿಲ್ ಅವರು ಏಪ್ರಿಲ್ 12ರಂದು ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಹಮ್ಮಿಕೊಂಡಿರುವ ಪ್ರತಿಭಟನೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಇಂತಹ ಹೋರಾಟಗಳಲ್ಲಿ ಅವರನ್ನು ಸಕ್ರಿಯಗೊಳಿಸಿ ಜೆಡಿಎಸ್ ಹೊಣೆಗಾರಿಕೆ ನೀಡುವುದು ದೇವೇಗೌಡರ ನಿರ್ಧಾರವಾಗಿದೆ. ಈ ನಿಟ್ಟಿನಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ರಾಜ್ಯಾಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದ್ದು, ಶೀಘ್ರವೇ ಆದೇಶ ಹೊರಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.