ಭೂಪಾಲ್: 15 ದಿನಗಳ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ನವಜೋಡಿ ಮಧುಚಂದ್ರಕ್ಕೆ ಮೆಘಾಲಯಕ್ಕೆ ತೆರಳಿದ್ದ ವೇಳೆ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ನಡೆದಿದೆ.
ಮಧ್ಯಪ್ರದೇಶದ ಇಂಧೋರ್ ನಿಂದ ರಾಜಾ ರಘುವಂಶಿ ಹಾಗೂ ಪತ್ನಿ ಸೋನಮ್ ರಘುವಂಶಿ ಹನಿಮೂನ್ ಗೆಂದು ಮೆಘಾಲಯ ಶಿಲ್ಲಾಂಗ್ ಗೆ ತೆರಳಿದ್ದರು. ಅಲ್ಲಿನ ಓಸ್ರಾ ಹಿಲ್ಸ್ ನಿಂದ ಅವರು ನಾಪತ್ತೆಯಾಗಿದ್ದಾರೆ.
ಓಸ್ರಾ ಹಿಲ್ಸ್ ಬಳಿ ಅವರ ಕೊನೆ ಲೊಕೇಷನ್ ತೋರಿಸುತ್ತಿದೆ. ಓಸ್ರಾ ಹಿಲ್ಸ್ ಗೆ ಹೋಗಲು ಅವರು ಸ್ಥಳೀಯ ಏಜೆನ್ಸಿಯಿಂದ ಸ್ಕೂಟರ್ ನ್ನು ಬಾಡಿಗೆಗೆ ಪಡೆದಿದ್ದರು. ಅದಾದ ಬಳಿಕ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ನೆಟ್ ವರ್ಕ್ ಸಮಸ್ಯೆಯಿರಬಹುದೆಂದು ಕುಟುಂಬದವರು ಎರಡು ದಿನ ಸುಮ್ಮನಿದ್ದರು ಆದರೆ ಮೇ 24ರಿಂದ ಈವರೆಗೆ ಅವರ ಫೋನ್ ಸ್ವಿಚ್ಡ್ ಆಫ್ ಆಗಿದೆ. ಇದರಿಂದ ಆತಂಕಗೊಂದಿರುವ ಎರಡೂ ಕುಟುಂಬ ಪೊಲೀಸರಿಗೆ ದೂರು ನೀಡಿದ್ದಾರೆ.
ಅಲ್ಲದೇ ರಾಜ ರಘುವಂಶಿ ಸಹೋದರ ಹಾಗೂ ಸೋನಮ್ ಸಹೋದರ ತುರ್ತು ವಿಮಾನದ ಮೂಲಕ ಶಿಲ್ಲಾಂಗ್ ತಲುಪಿ, ಅಲ್ಲಿನ ಏಜೆನ್ಸಿ ಸಂಪರ್ಕಿಸಿದಾಗ ಅವರು ಓಸ್ರಾ ಹಿಲ್ಸ್ ಗೆ ಹೋಗಲು ಬಾಡಿಗೆಗೆ ಹೋಂದಾ ಆಕ್ಟಿವಾವನ್ನು ಪಡೆದಿದ್ದರು ಎಂಬುದು ಗೊತ್ತಾಗಿದೆ. ಶಿಲ್ಲಾಂಗ್ ಪೊಲೀಸರಿಗೆ ಹಾಗೂ ಇಂದೋರ್ ಪೊಲೀಸರಿಗೆ ದೂರು ನೀಡಲಾಗಿದ್ದು, ದಂಪತಿಗಾಗಿ ಹುಡುಕಾಟದ ವೇಳೆ ಓಸ್ರಾ ಬೆಟ್ಟದ ಕಡಿನಲ್ಲಿ ಅವರು ಪ್ರಯಾಣಿಸಿದ್ದ ಬೈಕ್ ಪತ್ತೆಯಾಗಿದೆ. ಆದರೆ ಈವರೆಗೂ ದಂಪತಿ ಸುಳಿವಿಲ್ಲ. ಈ ಹಿಂದೆ ಇದೇ ರೀತಿ ಓಸ್ರಾ ಹಿಲ್ಸ್ ಗೆ ಹೋಗಿದ್ದ ಜೋಡಿಯೂ ನಾಪತ್ತೆಯಾಗಿದ್ದಾಗಿ ತಿಳಿದುಬಂದಿದೆ. ಪ್ರಕರಣ ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.