ಶಿವಮೊಗ್ಗ: ನವವಿವಾಹಿತೆಯೊಬ್ಬಳು ಪತಿ ಅಹಗೂ ಅತ್ತೆ ಕಿರುಕುಳಕ್ಕೆ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗದ ಕುರಂಬಳ್ಳಿಯ ಗೂಜಾನುಮಕ್ಕಿಯಲ್ಲಿ ನವವಿವಾಹಿತೆ ಸಾವಿಗೆ ಶರಣಾಗಿದ್ದಾಳೆ. ಮಾಲಾಶ್ರೀ (22) ಮೃತ ಮಹಿಳೆ. ಪತಿ ಅಶೋಕ್ ಹಾಗೂ ಅತ್ತೆಯ ಕಿರುಕುಳ, ಹಿಂಸೆಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಯಡಮನೆ ಮೂಲದ ಮಾಲಾಶ್ರೀ ಅವರನ್ನು ಕುರಂಬಳ್ಳಿಯ ಗಾಜಾನುಮಕ್ಕಿಯ ಅಶೋಕ್ ಎಂಬಾತನಿಗೆ ಕಳೆದ ಏಪ್ರಿಲ್ ನಲ್ಲಿ ವಿವಾಹ ಮಾಡಿಕೊಡಲಾಗಿತ್ತು. ಮದುವೆಯಾದಾಗಿನಿಂದ ಪತಿ ಮಹಾಶಯ, ಅತ್ತೆ ಕಿರುಕುಳ ನೀಡುತ್ತಿದ್ದರು. ತವರಿಗೆ ಮಾಲಾಶ್ರೀ ಹೋಗುವಂತಿರಲಿಲ್ಲ, ತವರು ಮನೆಯವರೊಂದಿಗೆ ಮಾತನಾಡುವಂತಿರಲಿಲ್ಲ, ತವರಿಗೆ ಹೋದರೂ ಪತಿಯ ಜೊತೆಯೇ ಹೋಗಿ ಆತನೊಂದಿಗೆ ವಾಪಸ್ ಆಗಬೇಕು. ಹೀಗೆ ಇನ್ನಿಲ್ಲದ ಕಿರುಕುಳವನ್ನು ನೀಡುತ್ತಿದ್ದರಂತೆ.
ಇದರಿಂದ ಮನನೊಂದ ಮಾಲಾಶ್ರೀ ನಾಲ್ಕು ದಿನಗಳ ಹಿಂದೆ ವಿಷ ಸೇವಿಸಿದ್ದಳು. ತೀವ್ರ ಅಸ್ವಸ್ಥಳಾಗಿದ್ದ ಮಾಲಾಶ್ರೀಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಮಗಳ ಸಾವಿಗೆ ಪತಿ ಅಶೋಕ್ ಹಾಗೂ ಅತ್ತೆ ಕಾರಣ ಎಂದು ಮಾಲಾಶ್ರೀ ಪೋಷಕರು ದೂರು ದಾಖಲಿಸಿದ್ದು, ಕುಂಸಿ ಠಾಣೆಯಲ್ಲಿ ಪ್ರಕರಾ ದಾಖಲಾಗಿದೆ. ಪತಿ ಅಶೋಕ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
