ಮಂಗಳೂರು: ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಹೂತು ಹಾಕಲಾಗಿದೆ ಎನ್ನುವ ದೂರಿಗೆ ಸಂಬಂಧಿಸಿದಂತೆ ಮತ್ತೊಬ್ಬ ವ್ಯಕ್ತಿಯ ಎಸ್ಐಟಿ ಎದುರು ಆಗಮಿಸಿ ದೂರು ನೀಡಿದ್ದಾರೆ.
ಬೆಳ್ತಂಗಡಿಯಲ್ಲಿರುವ ಎಸ್ಐಟಿ ಕಚೇರಿಗೆ ಬಂದ ಜಯಂತ್ ಟಿ. ಎಂಬುವವರು, 15 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಬಾಲಕಿಯೊಬ್ಬಳ ಮೃತದೇಹ ನೋಡಿದ್ದೇನೆ. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ತನಿಖೆ ನಡೆಸದೆ ಬಾಲಕಿ ಶವ ಹೂತು ಹಾಕಲಾಗಿದೆ. ಇದೊಂದು ಕೊಲೆ ಪ್ರಕರಣವಾಗಿದೆ. ಅದನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದಾರೆ. ಶವ ಹೂತು ಹಾಕಿರುವ ಸ್ಥಳ ನನಗೆ ಗೊತ್ತಿದೆ ಎಂದು ಎಸ್ಐಟಿಗೆ ಮಾಹಿತಿ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಇಷ್ಟು ದಿನ ಪೊಲೀಸರಿಗೆ ಯಾಕೆ ಮಾಹಿತಿ ನೀಡಿಲ್ಲ ಎನ್ನುವ ಬಗ್ಗೆ ಪ್ರತಿಕ್ರಿಯೆ ನೀಡಿದ ಜಯಂತ್, ತನ್ನ ಕುಟುಂಬದ ಹೆಣ್ಣು ಮಗಳು ಪದ್ಮಲತಾಗೆ ನ್ಯಾಯ ಸಿಕ್ಕಿಲ್ಲ. ಆಗ ನ್ಯಾಯ ಸಿಗುವ ವಿಶ್ವಾಸವಿರಲಿಲ್ಲ. ಹೀಗಾಗಿ ದೂರು ನೀಡಿರಲಿಲ್ಲ. ಈಗ ಎಸ್ಐಟಿ ಮೇಲೆ ವಿಶ್ವಾಸ ಇಟ್ಟು ಕಣ್ಣಾರೆ ನೋಡಿದ ವಿಚಾರದ ಬಗ್ಗೆ ದೂರು ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಜಯಂತ್ ಅವರು ನೀಡಿದ ದೂರನ್ನು ಸ್ವೀಕರಿಸಲು ಎಸ್ಐಟಿ ಅಧಿಕಾರಿಗಳು ನಿರಾಕರಿಸಿದ್ದಾರೆ. ಲಿಖಿತವಾಗಿ ಸೋಮವಾರ ಪೊಲೀಸ್ ಠಾಣೆಗೆ ದೂರು ಸಲ್ಲಿಸುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.