ಕಲಾ ಲೋಕದಲ್ಲಿ ಇದೀಗ ಹೊಸ ದಾಖಲೆಯೊಂದು ಸೃಷ್ಟಿಯಾಗಿದೆ. ಇತ್ತೀಚೆಗಷ್ಟೇ ದಿವಂಗತ ಕಲಾವಿದ ಎಂ.ಎಫ್. ಹುಸೇನ್ (M.F. Husain) ಅವರ ಅಮೂಲ್ಯ ಕಲಾಕೃತಿಯೊಂದು ಬೃಹತ್ ಮೊತ್ತಕ್ಕೆ ಹರಾಜಾಗಿ ಸುದ್ದಿಯಾಗಿತ್ತು. ಇದೀಗ ಸಫ್ರನ್‌ಆರ್ಟ್ (Saffronart) ಸಂಸ್ಥೆಯು ತನ್ನ 25ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ನೇರ ಹರಾಜು (Live Auction) ದಕ್ಷಿಣ ಏಷ್ಯಾ ಕಲಾ ಇತಿಹಾಸದಲ್ಲೇ ಅತಿ ಹೆಚ್ಚು ಮೌಲ್ಯದ ಮಾರಾಟವನ್ನು ದಾಖಲಿಸುವ ಮೂಲಕ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ.
ಏಪ್ರಿಲ್ 2ರಂದು ನಡೆದ ಈ ವಿಶೇಷ ಹರಾಜಿನಲ್ಲಿ 75 ಅತ್ಯುತ್ತಮ ಕಲಾಕೃತಿಗಳನ್ನು ಪ್ರದರ್ಶಿಸಲಾಗಿತ್ತು. ಕಲಾ ರಸಿಕರು ಮುಗಿಬಿದ್ದು ಬಿಡ್ ಮಾಡಿದ್ದರಿಂದ, ಒಂದೇ ದಿನದಲ್ಲಿ ಬರೋಬ್ಬರಿ 217.81 ಕೋಟಿ ರೂಪಾಯಿಗಳ ($25.62 ಮಿಲಿಯನ್) ಕಲಾಕೃತಿಗಳು ಮಾರಾಟವಾಗಿವೆ. ಅಷ್ಟೇ ಅಲ್ಲದೆ, ಏಪ್ರಿಲ್ 3ರಂದು ನಡೆದ ಆನ್‌ಲೈನ್ ಹರಾಜಿನಲ್ಲಿ (Online Auction) ಮತ್ತಷ್ಟು ಕಲಾಕೃತಿಗಳು ಮಾರಾಟವಾಗಿ 27.43 ಕೋಟಿ ರೂಪಾಯಿಗಳನ್ನು ಗಳಿಸಿದೆ. ಈ ಮೂಲಕ ಒಟ್ಟಾರೆಯಾಗಿ ಸಫ್ರನ್‌ಆರ್ಟ್ ಕೇವಲ ಎರಡು ದಿನಗಳಲ್ಲಿ 245 ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ಕಲಾಕೃತಿಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ.
ಈ ಹರಾಜಿನ ಮತ್ತೊಂದು ವಿಶೇಷವೆಂದರೆ ಖ್ಯಾತ ಕಲಾವಿದ ತ್ಯೆಬ್ ಮೆಹ್ತಾ (Tyeb Mehta) ಅವರ ‘ಟ್ರಸ್ಡ್ ಬುಲ್, 1956’ (Trussed Bull, 1956) ಎಂಬ ಮೇರು ಕೃತಿಯು ವಿಶ್ವ ದಾಖಲೆಯ ಬೆಲೆಗೆ ಮಾರಾಟವಾಗಿದೆ. ಈ ಮೂಲಕ ದಕ್ಷಿಣ ಏಷ್ಯಾ ಕಲೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಸಫ್ರನ್‌ಆರ್ಟ್‌ನ ಈ ಐತಿಹಾಸಿಕ ಸಾಧನೆಯು ಭಾರತೀಯ ಕಲಾ ಮಾರುಕಟ್ಟೆಗೆ ಹೊಸ ಹುರುಪನ್ನು ನೀಡಿದೆ ಎನ್ನಬಹುದು.