ಹೊಸ ಕೇಸರಿ ಬಣ್ಣದ ವಂದೇ ಭಾರತ್ ಎಕ್ಸ್‌ಪ್ರೆಸ್, ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಿದೆ. ಐಸಿಎಫ್ ಪರಿಚಯಿಸಿದ 31ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಇದಾಗಿದೆ.
ಕೆಲವು ವಾರಗಳ ಹಿಂದೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಕೋಚ್ ಕಾರ್ಖಾನೆಗೆ ಭೇಟಿ ನೀಡಿದ್ದರು. ಅಲ್ಲಿ ಅವರು ಕೇಸರಿ ಬಣ್ಣದ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಪರಿಶೀಲಿಸುತ್ತಿದ್ದರು. ಇದರ ವಿಶೇಷ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್, ಹಿಂದೆ ಬಿಳಿ ಮತ್ತು ನೀಲಿ ಬಣ್ಣದ ಸೌಂದರ್ಯಕ್ಕಾಗಿ ಗುರುತಿಸಲ್ಪಟ್ಟಿತ್ತು. ಇದೀಗ ಕಿತ್ತಳೆ-ಬೂದು ನೋಟವನ್ನು ಹೊಂದಿದೆ. ಇದು ಭಾರತೀಯ ರೈಲ್ವೆಯ ರೂಪಾಂತರದಲ್ಲಿ ಹೊಸ ಅಧ್ಯಾಯವೆಂದೇ ಹೇಳಬಹುದು. ಹೊರಭಾಗದಲ್ಲಿ ಮಾತ್ರ ಕಿತ್ತಳೆ ಬಣ್ಣವನ್ನು ಹೊಂದಿದ್ದು, ರೈಲಿನ ಒಳಭಾಗದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.
ಪ್ರಸ್ತುತ, ಭಾರತೀಯ ರೈಲ್ವೇಯು 50 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗಳನ್ನು ನಿರ್ವಹಿಸುತ್ತದೆ. 25 ವಿಭಿನ್ನ ಮಾರ್ಗಗಳನ್ನು ಒಳಗೊಂಡಿದ್ದು, ಹೊರಹೋಗುವ ಮತ್ತು ಹಿಂದಿರುಗುವ ಪ್ರಯಾಣಗಳಿಗೆ ಅವಕಾಶ ಕಲ್ಪಿಸುತ್ತದೆ. ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಸ್ಲೀಪರ್ ರೂಪಾಂತರದ ಒಳಾಂಗಣ ವಿನ್ಯಾಸವನ್ನು ಐಸಿಎಫ್ ಶ್ರದ್ಧೆಯಿಂದ ಅಂತಿಮಗೊಳಿಸುತ್ತಿದೆ. ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಳು ನೀಡುವ ಸೌಕರ್ಯಗಳನ್ನು ಮೀರಿಸುವ ನಿರೀಕ್ಷೆಯಿದೆ. ಈ ಹೊಸ ಮತ್ತು ಸುಧಾರಿತ ರೈಲು ಈ ಆರ್ಥಿಕ ವರ್ಷದಲ್ಲಿ ಸಿದ್ಧಗೊಳ್ಳುವ ನಿರೀಕ್ಷೆಯಿದೆ.