ಬೆಂಗಳೂರು: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳಲ್ಲಿ ಈಡೇರಿಕೆ ಒತ್ತಾಯಿಸಿ ಆ. 5ರಿಂದ ಸಾರಿಗೆ ನೌಕರರು ಮುಷ್ಕರ ಕೈಗೊಂಡಿರುವ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆ ಆಯುಕ್ತರ ನೇತೃತ್ವದಲ್ಲಿ ಸಾರಿಗೆ ನೌಕರ ಸಂಘಟನೆಯ ಪ್ರಮುಖರು ಮತ್ತು ಸಾರಿಗೆ ನಿಗಮಗಳ ಅಧಿಕಾರಿಗಳ ನಡುವೆ ಸೋಮವಾರ ನಡೆದ ಸಭೆ ಒಮ್ಮತದ ನಿರ್ಧಾರ ಕೈಗೊಳ್ಳಲು ವಿಫಲವಾಗಿದೆ.
ಹೀಗಾಗಿ ಆಗಸ್ಟ್ 2ರಂದು ಮತ್ತೆ ಸಭೆ ನಡೆಸಲಾಗುವುದು. ಸಾರಿಗೆ ನೌಕರರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಇತ್ಯರ್ಥಪಡಿಸಲು ಕಾರ್ಮಿಕ ಇಲಾಖೆ ಆಯುಕ್ತ ಗೋಪಾಲಕೃಷ್ಣ ಅವರು ಸೋಮವಾರ ಸಂಧಾನ ಸಭೆ ನಡೆಸಿದ್ದಾರೆ. ಆದರೆ, ಸಭೆಯಲ್ಲಿ ನೌಕರರ ಬೇಡಿಕೆ ಈಡೇರಿಕೆಗಳ ಕುರಿತು ಸಾರಿಗೆ ನಿಗಮಗಳ ಅಧಿಕಾರಿಗಳು ಯಾವುದೇ ಸ್ಪಷ್ಟ ಭರವಸೆ ನೀಡಿಲ್ಲ. ಈ ಕುರಿತು ಚರ್ಚೆ ನಡೆಯುತ್ತಿದ್ದು, ನಿರ್ಧರಿಸಲು ಸಮಯ ಬೇಕಿದೆ ಎಂದು ಹೇಳಿದ್ದಾರೆ. ಹೀಗಾಗಿ ಆಗಸ್ಟ್ 2ರಂದು ಸಭೆ ನಡೆಸಲು ತೀರ್ಮಾನಿಸಲಾಗಿದೆ.