ಬೆಂಗಳೂರು : ಆಗಸ್ಟ್ 10ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮೆಟ್ರೋ ಹಳದಿ ಮಾರ್ಗ ಉದ್ಘಾಟಿಸಲು ಈ ಭಾಗಕ್ಕೆ ಆಗಮಿಸುತ್ತಿದ್ದಾರೆ. ಈ ಭಾಗಕ್ಕೆ ಮೆಟ್ರೋ ಸಂಚರಿಸುವುದರಿಂದ ನಿಮ್ಮ ಆಸ್ತಿ ಮೌಲ್ಯವು ಜಾಸ್ತಿಯಾಗಲಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಇಂದು ಬೆಂಗಳೂರು ದಕ್ಷಿಣ ತಾಲೂಕಿನ ದೊಡ್ಡತೋಗೂರು ಪಟ್ಟಣ ಪಂಚಾಯತಿಯ ನೂತನ ಕಚೇರಿ ಕಟ್ಟಡ ಶಂಕುಸ್ಥಾಪನೆ ನೆರವೇರಿಸಿ, ವಿವಿಧ ಯೋಜನೆಗಳಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ವಿತರಿಸಿದ ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ವಿವಿಧ ಅಭಿವೃದ್ಧಿ ಕಾರ್ಯಗಳ ಮೂಲಕ ಬೆಂಗಳೂರಿಗೆ ಹೊಸ ರೂಪವನ್ನು ನೀಡುತ್ತಿದ್ದೇವೆ. ಪಾರದರ್ಶಕ ಆಡಳಿತ ವ್ಯವಸ್ಥೆ ರೂಪಿಸುವ ಉದ್ದೇಶದಿಂದ ಬಿಬಿಎಂಪಿ ವ್ಯಾಪ್ತಿಯನ್ನು ‘ಗ್ರೇಟರ್ ಬೆಂಗಳೂರು ಪ್ರದೇಶ’ವನ್ನಾಗಿ ಗುರುತಿಸಿ 5 ಪಾಲಿಕೆಗಳನ್ನು ರಚಿಸಲಾಗಿದೆ. ಈ ಭಾಗವನ್ನು ಸಹ ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಸೇರಿಸಬೇಕೆಂದು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರು, ಮುಖಂಡರು ಮನವಿ ಮಾಡುತ್ತಿದ್ದಾರೆ. ಇದೇ ವಿಚಾರವಾಗಿ ಆನೇಕಲ್ ಶಾಸಕರಾದ ಶ್ರೀ ಬಿ. ಶಿವಣ್ಣನವರು ಸಹ ಪ್ರಸ್ತಾಪಿಸಿದ್ದಾರೆ. ದೊಡ್ಡತೋಗೂರು ಪಟ್ಟಣ ಪಂಚಾಯತಿಗೆ ಈಗಾಗಲೇ 28 ಕೋಟಿ ರೂ. ವೆಚ್ಚದ ಅನೇಕ ಅಭಿವೃದ್ಧಿ ಕಾಮಗಾರಿ ನೆರವೇರಿಸಲು ಅನುಮತಿ ನೀಡಲಾಗಿದೆ. ಆಗಸ್ಟ್ 10ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮೆಟ್ರೋ ಹಳದಿ ಮಾರ್ಗ ಉದ್ಘಾಟಿಸಲು ಈ ಭಾಗಕ್ಕೆ ಆಗಮಿಸುತ್ತಿದ್ದಾರೆ. ಈ ಭಾಗಕ್ಕೆ ಮೆಟ್ರೋ ಸಂಚರಿಸುವುದರಿಂದ ನಿಮ್ಮ ಆಸ್ತಿ ಮೌಲ್ಯವು ಜಾಸ್ತಿಯಾಗಲಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.