ಮಹಾರಾಷ್ಟ್ರದ ನಾಗ್ಪುರದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದನ್ನು ಪ್ರಶ್ನಿಸಿದ ಯುವಕನಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ, ಯುವಕ ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸುತ್ತಿದ್ದ ಅಧಿಕಾರಿಯನ್ನು ಗಮನಿಸಿ ಅವರ ಬಳಿ ಹೋಗಿ ಪ್ರಶ್ನಿಸುತ್ತಾನೆ. ಏಕೆ ಹೆಲ್ಮೆಟ್ ಧರಿಸಿಲ್ಲ ಎಂದು ಕೇಳಿದಾಗ, ಅಧಿಕಾರಿ ತನ್ನ ಮೋಟಾರ್‌ಸೈಕಲ್ ನಿಲ್ಲಿಸಿ, ಯುವಕನನ್ನು ಹತ್ತಿರ ಕರೆದು ಎರಡು ಬಾರಿ ಕಪಾಳಕ್ಕೆ ಹೊಡೆಯುತ್ತಾನೆ. ಈ ಸಂಪೂರ್ಣ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಯುವಕನಿಗೆ ಹೊಡೆದ ನಂತರ, ಅಧಿಕಾರಿ ತನಗೆ ಹಲ್ಲು ನೋವು ಇತ್ತು, ಅದಕ್ಕಾಗಿಯೇ ಹೆಲ್ಮೆಟ್ ಧರಿಸಿರಲಿಲ್ಲ ಎಂದು ಸಮಜಾಯಿಷಿ ನೀಡುತ್ತಾನೆ. ವಿಡಿಯೋದಲ್ಲಿ ಯುವಕ ಯಾವುದೇ ಕೆಟ್ಟ ಪದಗಳನ್ನು ಬಳಸಿದ ಯಾವುದೇ ಸಾಕ್ಷ್ಯವಿಲ್ಲದಿದ್ದರೂ, ಅಧಿಕಾರಿ ಯುವಕ ಹಾಗೆ ಮಾಡಿದ್ದಾನೆ ಎಂದು ಆರೋಪಿಸುತ್ತಾನೆ. ಘರ್ಷಣೆಯ ನಂತರ, ಆನಂದ್ ಸಿಂಗ್ ಎಂದು ಗುರುತಿಸಲಾದ ಅಧಿಕಾರಿ ಮತ್ತೆ ತನ್ನ ಬೈಕ್ ಏರಿ ಹೆಲ್ಮೆಟ್ ಹಾಕಿಕೊಳ್ಳುತ್ತಾನೆ.
ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಅಧಿಕಾರಿಯ ಈ ಕ್ರಮವನ್ನು ಖಂಡಿಸಿದ್ದಾರೆ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಒಬ್ಬ ಬಳಕೆದಾರರು, “ಸಾಮಾನ್ಯ ನಾಗರಿಕನಿಗೆ ಹಲ್ಲು ನೋವಿದ್ದರೆ ಇದೇ ರೀತಿಯ ವಿನಾಯಿತಿ ಸಿಗುತ್ತದೆಯೇ ?” ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, “ಪೊಲೀಸ್ ಅಧಿಕಾರಿಗಳು ಹೆಲ್ಮೆಟ್ ಧರಿಸದಿರುವುದು, ಸೀಟ್ ಬೆಲ್ಟ್ ಬಳಸದಿರುವುದು, ಚಾಲನೆ ಮಾಡುವಾಗ ಫೋನ್‌ನಲ್ಲಿ ಮಾತನಾಡುವುದು, ತಪ್ಪು ದಿಕ್ಕಿನಲ್ಲಿ ಚಾಲನೆ ಮಾಡುವುದು ಮತ್ತು ಟ್ರಾಫಿಕ್ ಸಿಗ್ನಲ್‌ಗಳನ್ನು ಉಲ್ಲಂಘಿಸುವುದು ಮುಂತಾದ ಅನೇಕ ಪ್ರಕರಣಗಳನ್ನು ನೀವು ಕಾಣಬಹುದು” ಎಂದು ಟೀಕಿಸಿದ್ದಾರೆ.