ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಮೆರವಣಿಗೆಯಲ್ಲಿ ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳ ಸ್ಥಬ್ಧ ಚಿತ್ರಗಳು ಕೂಡ ರಾರಾಜಿಸಲಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಮೈಸೂರು ದಸರಾ ಮಹೋತ್ಸವ ಉನ್ನತ ಮಟ್ಟದ ಸಮಿತಿಯ ಸಭೆ ನಡೆಸಲಾಗಿದೆ. ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಶಕ್ತಿ ಯೋಜನೆ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ ಗ್ಯಾರಂಟಿ ಯೋಜನೆಗಳ ಸ್ತಬ್ಧ ಚಿತ್ರಗಳು ಈ ಬಾರಿ ದಸರಾ ಮೆರವಣಿಗೆಯಲ್ಲಿ ಇರಲಿವೆ ಎಂದು ಹೇಳಿದ್ದಾರೆ.
ಅರ್ಥಪೂರ್ಣವಾಗಿ ಮತ್ತು ಅದ್ದೂರಿಯಾಗಿ ದಸರಾ ಮಹೋತ್ಸವ ಆಚರಿಸಲು ಸದಸ್ಯರು ಸಲಹೆ ನೀಡಿದ್ದಾರೆ. ಮೈಸೂರು ದಸರಾ ಉದ್ಘಾಟಕರ ಆಯ್ಕೆಯ ಬಗ್ಗೆ ನನಗೆ ಹೊಣೆ ನೀಡಿದ್ದಾರೆ. ದಸರಾ ಪೂರ್ವಭಾವಿ ಸಭೆಯಲ್ಲಿ ಒಬ್ಬರ ಹೆಸರಿನ ಕುರಿತು ಚರ್ಚೆ ಮಾಡಿದ್ದೇವೆ. ಕೆಆರ್ ಕ್ಷೇತ್ರದ ಶಾಸಕ ಸುತ್ತೂರು ಶ್ರೀಗಳ ಹೆಸರು ಪ್ರಸ್ತಾಪಿಸಿದ್ದಾರೆ. ಆದರೆ, ಮೈಸೂರು ದಸರಾ ಉದ್ಘಾಟಕರ ಹೆಸರು ಅಂತಿಮವಾಗಿಲ್ಲ. ಮುಂದೆ ಚರ್ಚೆ ನಡೆಸಿ ಯಾರು ದಸರಾ ಉದ್ಘಾಟಿಸಬೇಕೆಂದು ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಪ್ರಸಕ್ತ ವರ್ಷ ದಸರಾ ಅಂಗವಾಗಿ ಏರೋಶೋ ಆಯೋಜಿಸಲು ಚಿಂತನೆ ನಡೆಸಲಾಗಿದೆ. ಈ ವಿಚಾರವಾಗಿ ರಕ್ಷಣಾ ಸಚಿವರೊಂದಿಗೆ ಮಾತನಾಡುತ್ತೇವೆ. ಈ ಹಿಂದೆ ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ದಸರಾ ಸಂದರ್ಭದಲ್ಲಿ ಏರೋ ಶೋ ಆಯೋಜಿಸಿದ್ದೆವು. ಪ್ರಶಸ್ತಿ ವರ್ಷ ಅದ್ದೂರಿಯಾಗಿ ಮೈಸೂರು ದಸರಾ ಆಚರಿಸುತ್ತೇವೆ ಎಂದರು.