ಮೈಸೂರು: ಮೈಸೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ವಿಶ್ವ ವಿಖ್ಯಾತ ಜಂಬೂ ಸವಾರಿ ಮೆರವಣಿಗೆ ಅದ್ಧೂರಿಯಾಗಿ ಸಂಪನ್ನಗೊಂಡಿದೆ. ಆದರೆ ದಸರಾ ಸರ್ಕಾರಿ ಕಾರ್ಯಕ್ರಮದ ಪರೇಡ್ ನಲ್ಲಿ ಸಿಎಂ, ಸಚಿವರ ಜೊತೆಗೆ ಬಾಲಕನೊಬ್ಬ ಕಾಣಿಸಿಕೊಂಡಿದ್ದು ತೀವ್ರ ಚರ್ಚೆಗೆ ಕಾರಣವಾಗಿದೆ.
ಮೈಸೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ನಿನ್ನೆ ನಡೆದ ಪರೇಡ್ ಕಾರ್ಯಕ್ರಮದಲ್ಲಿ ಸಚಿವರ ಮೊಮ್ಮಗ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ,ಕೆ,ಶಿವಕುಮಾರ್ ಹಾಗೂ ಸಚಿವರ ನಡುವೆ ತೆರೆದ ವಾಹನದಲ್ಲಿ ಕಾಣಿಸಿಕೊಂಡಿದ್ದು, ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಮಾಹಿತಿ ಕೇಳಿದೆ.
ಸರ್ಕಾರಿ ಕಾರ್ಯಕ್ರಮದಲ್ಲಿ ಸಚಿವರ ಕುಟುಂಬದವರು ಮಧ್ಯಪ್ರವೇಶ ಮಾಡಿದ್ದು ಯಾಕೆ? ಪರೇಡ್ ನಡೆಸುವಾಗ ತೆರೆದ ವಾಹನದಲ್ಲಿ ಸಿಎಂ, ಡಿಸಿಎಂ, ಸಚಿವರ ಮಧ್ಯೆ ಬಾಲಕನೊಬ್ಬ ಇದ್ದು, ಆತ ಯಾರು? ಕುಟುಂಬದವರು ಭಾಗಿಯಾಗಿದ್ದು ಯಾಕೆ? ಎಂದು ವಿವರ ನೀಡುವಂತೆ ಕೇಳಿದೆ.
ದಸರಾ ಪರೇಡ್ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಹೆಚ್.ಸಿ.ಮಹದೇವಪ್ಪ ಹಾಗೂ ಶಾಸಕ ತನ್ವೀರ್ ಸೇಠ್ ತೆರೆದ ವಾಹನದಲ್ಲಿ ಜನರತ್ತ ಕೈಬೀಸುತ್ತಾ ಸಾಗಿದ್ದರು. ಇದೇ ವಾಹನದಲ್ಲಿ ಸಚಿವ ಹೆಚ್.ಸಿ ಮಹದೇವಪ್ಪ ಪಕ್ಕದಲ್ಲಿ ಬಾಲಕನೊಬ್ಬ ಕಾಣಿಸಿಕೊಂಡಿದ್ದು ವಿವಾದಕ್ಕೆ ಕಾರಣವಾಗಿದೆ. ಬಾಲಕ ಹೆಚ್.ಸಿ.ಮಹದೇವಪ್ಪ ಅವರ ಮೊಮ್ಮಗ ಎನ್ನಲಾಗಿದೆ.