ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿ ವಿಜಯದಶಮಿ ಮೆರವಣಿಗೆಯಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚು ಕಲಾತಂಡಗಳು ಭಾಗವಹಿಸಲಿವೆ.
259 ಮಹಿಳೆಯರು ಸೇರಿದಂತೆ ಒಟ್ಟು 1,479 ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಲಿದ್ದಾರೆ. ಒಟ್ಟು 61 ತಂಡಗಳು ಭಾಗವಹಿಸಲಿವೆ. ರಾಜ್ಯಾದ್ಯಂತ ಇರುವ ವಿವಿಧ ಕಲಾತಂಡಗಳು ಮೈಸೂರಿಗೆ ಆಗಮಿಸಿದ್ದು, ನಾಳೆ ಅಂಬಾವಿಲಾಸ ಅರಮನೆ ಆವರಣದಿಂದ ಬನ್ನಿಮಂಟಪದ ಪಂಜಿನ ಕವಾಯಿತು ಮೈದಾನದವರೆಗೆ ನಡೆಯಲಿರುವ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲಿವೆ.
ನಾಳೆ ಮಧ್ಯಾಹ್ನ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜ ಪೂಜೆ ನೆರವೇರಿದ ಬಳಿಕ ಕಲಾವಿದರು ರಾಜಪಥಕ್ಕೆ ಕಲೋತ್ಸಾಹ ತುಂಬಿ ದಾರಿಯುದ್ದಕ್ಕೂ ಪ್ರೇಕ್ಷಕರ ಕಣ್ಮನ ಸೆಳೆಯಲಿದ್ದಾರೆ.
ನಂದಿಧ್ವಜ, ನಾದಸ್ವರ, ವೀರಗಾಸೆ, ಪುರವಂತಿಕೆ, ಕೊಂಬುಕಹಳೆ, ಕಂಸಾಳೆ, ಕೀಲಕುದುರೆ, ಕೋಲಾಟ, ಚಿಟ್ ಮೇಳ, ಕಣಿವಾದನ, ಹೂವಿನ ನೃತ್ಯ, ಹೆಜ್ಜೆ ಮೇಳ, ತಮಟೆ-ನಗಾರಿ, ಹಲಗೆ ಮೇಳ, ಯಕ್ಷಗಾನ ಬೊಂಬೆಗಳು ಮೊದಲಾದವು ನಾಡಿನ ಕಲಾವೈಭವವನ್ನು ಸಾರುತ್ತಾ ಮೆರವಣಿಗೆಯಲ್ಲಿ ಸಾಗಲಿವೆ.