ಮೈಸೂರು : ಡಿಸೆಂಬರ್ ನಲ್ಲಿ ನನ್ನ ಹೊಸಮನೆ ಗೃಹ ಪ್ರವೇಶವಿದೆ, ಯಾರನ್ನೂ ಗೃಹ ಪ್ರವೇಶಕ್ಕೆ ಆಹ್ವಾನಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಡಿಸೆಂಬರ್ ನಲ್ಲಿ ಹೊಸ ಮನೆ ಗೃಹ ಪ್ರವೇಶ ಮಾಡುತ್ತೇವೆ, ಯಾರನ್ನೂ ಆಹ್ವಾನಿಸುವುದಿಲ್ಲ, ನೀವು ಬಂದರೂ ಬೇಡ ಎಂದು ಕಳುಹಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಈಗ ನಾವಿರುವ ಮನೆ ನನ್ನದಲ್ಲ, ಮರಿಸ್ವಾಮಿಯವರದ್ದು . ನನಗೆ, ನನ್ನ ಸ್ನೇಹಿತರಿಗೆ ನನ್ನ ಮಗನಿಗೆ ಬಂದಾಗ ಊಟ ಹಾಕುವುದು ಮರಿಸ್ವಾಮಿ. ಈಗ ನಾವಿರುವುದು ಮರಿಸ್ವಾಮಿಯವರ ಮನೆ. ಆತನೇ ನಮಗೆ ಅನ್ನದಾತ. ಡಿಸೆಂಬರ್ ನಲ್ಲಿ ನಮ್ಮ ಹೊಸ ಮನೆ ಗೃಹ ಪ್ರವೇಶ ಮಾಡುತ್ತೇನೆ. ಗೃಹ ಪ್ರವೇಶದ ಬಳಿಕ ಹೊಸ ಮನೆಗೆ ಶಿಫ್ಟ್ ಆಗುತ್ತೇವೆ ಎಂದು ಹೇಳಿದರು.
ಜಿಎಸ್ಟಿ ಸರಳೀಕರಣ ; ರಾಜ್ಯಕ್ಕೆ ಅಂದಾಜು 15 ಸಾವಿರ ಕೋಟಿ ರೂ.ಗಳ ನಷ್ಟ
ಬಿಹಾರ ಚುನಾವಣೆಯ ಹಿನ್ನಲೆಯಲ್ಲಿ ಜಿಎಸ್ಟಿಯನ್ನು ಸರಳೀಕರಣಗೊಳಿಸಿರುವ ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ರಾಜ್ಯಕ್ಕೆ ಅಂದಾಜು 15 ಸಾವಿರ ಕೋಟಿ ರೂ.ಗಳ ನಷ್ಟವಾಗಲಿದೆ. ಜಿಎಸ್ಟಿ ಉತ್ಸವ ಆಚರಿಸುವ ಅಗತ್ಯ ಏನಿದೆ? 2017 ರಲ್ಲಿ ಕೇಂದ್ರ ಸರ್ಕಾರವೇ ಜಿಎಸ್ಟಿಯನ್ನು ಜಾರಿಗೆ ತಂದು, ದರ ನಿಗದಿಪಡಿಸಿತು. ಕಳೆದ ಎಂಟು ವರ್ಷದಿಂದ ಹೆಚ್ಚಿನ ದರ ಪಡೆದಿರುವ ಕೇಂದ್ರ ಸರ್ಕಾರ, ಆ ಹಣವನ್ನು ಮರಳಿ ಜನರಿಗೆ ನೀಡುವರೇ? ತಾವೇ ಹೆಚ್ಚಿಸಿದ ಜಿಎಸ್ಟಿ ದರವನ್ನು ತಾವೇ ಕಡಿಮೆ ಮಾಡಿ, ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ಕೆಲಸದಲ್ಲಿ ಕೇಂದ್ರ ತೊಡಗಿದೆ. ಬಿಹಾರದ ಚುನಾವಣೆಯಿರುವ ಕಾರಣ ಜಿಎಸ್ಟಿಯನ್ನು ಸರಳೀಕರಣಗೊಳಿಸಿದ್ದಾರೆ. ಕೇಂದ್ರದಿಂದ ತೆರಿಗೆ ಹಣವಾಗಿ ಕೇವಲ 3,200 ಕೋಟಿ ರೂ.ಗಳನ್ನು ರಾಜ್ಯಕ್ಕೆ ನೀಡಲಾಗಿದೆ. ಉತ್ತರ ಪ್ರದೇಶಕ್ಕೆ ಶೇ.18 ರಷ್ಟು ನೀಡುತ್ತಿದ್ದು, ರಾಜ್ಯಕ್ಕೆ ಕೇವಲ ಶೇ.3.5 ನೀಡುತ್ತಿರುವುದು ಕನ್ನಡಿಗರಿಗೆ ಮಾಡುತ್ತಿರುವ ಘೋರ ಅನ್ಯಾಯ. ಕರ್ನಾಟಕ 4.5 ಲಕ್ಷ ಕೋಟಿ ತೆರಿಗೆ ರೂಪದಲ್ಲಿ ಕೇಂದ್ರಕ್ಕೆ ನೀಡಿದರೆ, ನಮಗೆ ರೂಪಾಯಿಗೆ ಕೇವಲ 14 ಪೈಸೆ ಮಾತ್ರ ಮರಳಿ ದೊರೆಯುತ್ತದೆ. 15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ನೀಡಲಾಗಿದ್ದ ವಿಶೇಷ ಅನುದಾನವನ್ನು ಕೇಂದ್ರ ವಿತ್ತಸಚಿವರು ರದ್ದುಪಡಿಸಿದರು.
ಆಯೋಗದ ಶಿಫಾರಸ್ಸಿನಂತೆ ₹5,490 ಕೋಟಿ ಹಾಗೂ ಕೆರೆಗಳ ಅಭಿವೃದ್ದಿ ₹3,000 ಕೋಟಿ, ರಸ್ತೆ ನಿರ್ಮಾಣಕ್ಕೆ ₹3,000 ಕೋಟಿ, ಭದ್ರಾ ಮೇಲ್ದಂಡೆ ಯೋಜನೆಗೆ ₹5,000 ಕೊಟಿ ಅನುದಾನವನ್ನು ನಮಗೆ ಕೊಟ್ಟಿಲ್ಲ. ಒಟ್ಟಾರೆ 17,000 ಕೋಟಿ ರೂ. ಬರಬೇಕಾಗಿದ್ದ ಅನುದಾನ ಖೋತಾ ಆಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ಅಗತ್ಯಬಿದ್ದರೆ ನ್ಯಾಯಾಲಯದ ನೆರವು ಪಡೆದು ಕೇಂದ್ರದ ಅನುದಾನ ಪಡೆಯಲಾಗುವುದು. ಕೇಂದ್ರದ ಕಡಿಮೆ ಅನುದಾನದ ನಡುವೆ ಗ್ಯಾರಂಟಿಗಳ ವೆಚ್ಚವನ್ನು ಭರಿಸುವುದು ಸರ್ಕಾರಕ್ಕೆ ಸವಾಲಾಗಿದ್ದರೂ, ಸವಾಲನ್ನು ದಿಟ್ಟತನದಿಂದ ಎದುರಿಸುತ್ತಿದ್ದೇವೆ. ಜಿಎಸ್ಟಿ ಸರಳೀಕರಣದಿಂದ ರಾಜ್ಯ ಸರ್ಕಾರಗಳು ಹೆಚ್ಚು ನಷ್ಟ ಎದುರಿಸಲಿವೆ. ಕರ್ನಾಟಕಕ್ಕೆ ಇದರಿಂದ ವಾರ್ಷಿಕ ಅಂದಾಜು 15 ಸಾವಿರ ಕೋಟಿ ರೂಪಾಯಿ ನಷ್ಟವಾಗಲಿದೆ. ಕೇಂದ್ರ ಸರ್ಕಾರವು ಎನ್ ಡಿ ಎ ಆಡಳಿತದಡಿ ಬರುವ ರಾಜ್ಯಗಳ ಅನುಕೂಲಕ್ಕೆ ತಕ್ಕಂತೆ ಜಿಎಸ್ಟಿ ಪರಿಹಾರವನ್ನು ನೀಡುತ್ತಿದೆ. ಕರ್ನಾಟಕದ ಬಿಜೆಪಿ ಸಂಸದರಿಗೆ ಮೋದಿಯವರನ್ನು ಹೊಗಳುವುದೇ ಕೆಲಸವಾಗಿದ್ದು, ರಾಜ್ಯದ ಹಿತಚಿಂತನೆ ಮಾಡುತ್ತಿಲ್ಲ ಎಂದರು.
ಬಿಹಾರ ಚುನಾವಣೆಯ ಹಿನ್ನಲೆಯಲ್ಲಿ ಜಿಎಸ್ಟಿಯನ್ನು ಸರಳೀಕರಣಗೊಳಿಸಿರುವ ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ರಾಜ್ಯಕ್ಕೆ ಅಂದಾಜು 15 ಸಾವಿರ ಕೋಟಿ ರೂ.ಗಳ ನಷ್ಟವಾಗಲಿದೆ.
— Siddaramaiah (@siddaramaiah) October 3, 2025
ಜಿಎಸ್ಟಿ ಉತ್ಸವ ಆಚರಿಸುವ ಅಗತ್ಯ ಏನಿದೆ? 2017 ರಲ್ಲಿ ಕೇಂದ್ರ ಸರ್ಕಾರವೇ ಜಿಎಸ್ಟಿಯನ್ನು ಜಾರಿಗೆ ತಂದು, ದರ ನಿಗದಿಪಡಿಸಿತು. ಕಳೆದ ಎಂಟು ವರ್ಷದಿಂದ ಹೆಚ್ಚಿನ ದರ… pic.twitter.com/ib7iT5wD1b