ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ರೈಸಿಂಗ್ ಭಾರತ್ ಸಮ್ಮಿಟ್ 2025 ರಲ್ಲಿ ಟ್ರಾಫಿಕ್ ನಿಯಮಗಳ ಮಹತ್ವವನ್ನು ಒತ್ತಿ ಹೇಳುವಾಗ ತಮಗೂ ಮುಂಬೈನ ಬಾಂದ್ರಾ-ವರ್ಲಿ ಸಮುದ್ರ ಸೇತುವೆಯಲ್ಲಿ ಎರಡು ಬಾರಿ ದಂಡ ವಿಧಿಸಲಾಗಿದೆ ಎಂದು ಬಹಿರಂಗಪಡಿಸಿದ್ದಾರೆ.
“ನಾನು ಬಾಂದ್ರಾ-ವರ್ಲಿ ಸಮುದ್ರ ಸೇತುವೆ ಕಟ್ಟಿಸಿದ್ದೇನೆ. ಆದರೂ ನನ್ನ ಕಾರಿಗೇ ಎರಡು ಸಲ ಚಲನ್ ಬಂತು. ಕ್ಯಾಮೆರಾ ಎಲ್ಲವನ್ನೂ ಹಿಡಿಯುತ್ತೆ, ಯಾರೂ ತಪ್ಪಿಸಿಕೊಳ್ಳೋಕೆ ಆಗಲ್ಲ. ನಾನು 500 ರೂಪಾಯಿ ಕಟ್ಟಿದೆ. ಜನರು ದಂಡದ ಬಗ್ಗೆ ಕಂಪ್ಲೇಂಟ್ ಮಾಡ್ತಾರೆ, ಆದ್ರೆ ರೂಲ್ಸ್ ಮುರಿದ್ರೆ ದಂಡ ತಪ್ಪಿದ್ದಲ್ಲ. ದಂಡ ಹಾಕುವುದು ಸರ್ಕಾರಕ್ಕೆ ದುಡ್ಡು ಮಾಡೋಕೆ ಅಲ್ಲ” ಎಂದು ಗಡ್ಕರಿ ಸ್ಪಷ್ಟಪಡಿಸಿದರು.
ಇದೇ ವೇಳೆ ಟೋಲ್ ದರಗಳ ಬಗ್ಗೆ ಮಾತನಾಡಿದ ಅವರು, “ಟೋಲ್ ಕಟ್ಟೋ ಜನರಿಗೆ ಖುಷಿಪಡೋ ಸುದ್ದಿ ಇದೆ. ಟೋಲ್ ದರ ಶೀಘ್ರದಲ್ಲೇ ಕಡಿಮೆಯಾಗಲಿದೆ. ಈ ಬಗ್ಗೆ 8-10 ದಿನಗಳಲ್ಲಿ ಅಧಿಕೃತ ಮಾಹಿತಿ ನೀಡಲಾಗುವುದು” ಎಂದು ಭರವಸೆ ನೀಡಿದರು.
ರಸ್ತೆ ಅಪಘಾತಗಳನ್ನು ಶೇಕಡಾ 50 ರಷ್ಟು ಕಡಿಮೆ ಮಾಡುವ ಸರ್ಕಾರದ ಗುರಿಯನ್ನು ವಿವರಿಸಿದ ಗಡ್ಕರಿ, “ದುರದೃಷ್ಟವಶಾತ್, ನಾವು ಅಂದುಕೊಂಡ ಗುರಿ ತಲುಪಿಲ್ಲ. ರಸ್ತೆಗಳ ವಿನ್ಯಾಸ ಮತ್ತು ವಾಹನಗಳ ತಾಂತ್ರಿಕ ದೋಷಗಳು ಅಪಘಾತಗಳಿಗೆ ಕಾರಣವಾಗುತ್ತವೆ. ನಾವು ಈಗಾಗಲೇ ಕಪ್ಪು ಚುಕ್ಕೆಗಳನ್ನು ಸರಿಪಡಿಸಲು 40 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದ್ದೇವೆ. ಅಪಘಾತದಲ್ಲಿ ಸಿಲುಕಿದವರಿಗೆ ಸಹಾಯ ಮಾಡುವವರಿಗೆ ರಾಹ್‌ವೀರ್ ಯೋಜನೆಯಡಿ 25 ಸಾವಿರ ರೂಪಾಯಿ ಬಹುಮಾನ ನೀಡುತ್ತೇವೆ. ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಭರಿಸಲು ಪ್ರಧಾನಮಂತ್ರಿಯವರಲ್ಲಿ ಮನವಿ ಮಾಡಿದ್ದೇವೆ” ಎಂದರು.
ಮಾನವನ ವರ್ತನೆಯೇ ರಸ್ತೆ ಅಪಘಾತಗಳಿಗೆ ಮುಖ್ಯ ಕಾರಣ ಎಂದು ವಿಷಾದಿಸಿದ ಅವರು, “ಜನರು ರಸ್ತೆ ನಿಯಮಗಳನ್ನು ಕಲಿಯಬೇಕು. ಜನರು ಒಲಿಂಪಿಕ್ ಅಥ್ಲೀಟ್‌ಗಳಂತೆ ಹಾರಿ ಹೋಗುವ ಡಿವೈಡರ್‌ಗಳ ಎತ್ತರವನ್ನು 3.25 ಅಡಿಗಳಿಗೆ ಹೆಚ್ಚಿಸುತ್ತೇವೆ. ಜನರು ಹಾರುವುದು ತಪ್ಪಿಸಲು ಮರಗಳನ್ನು ನೆಡುತ್ತೇವೆ. ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಮತ್ತು ಸೈಕ್ಲಿಸ್ಟ್‌ಗಳಿಗೆ ಮೇಲ್ಸೇತುವೆಗಳನ್ನು ನಿರ್ಮಿಸುತ್ತೇವೆ. ದಿವ್ಯಾಂಗರಿಗೂ ವಿಶೇಷ ಸೇತುವೆ ನಿರ್ಮಿಸುವ ಯೋಜನೆ ಇದೆ” ಎಂದು ತಿಳಿಸಿದರು.
ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವುದು 30 ಸಾವಿರ ಅಪಘಾತ ಸಾವುಗಳಿಗೆ ಕಾರಣವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ವಾಹನದೊಂದಿಗೆ ಎರಡು ಹೆಲ್ಮೆಟ್‌ಗಳನ್ನು ಮಾರಾಟ ಮಾಡಲು ತಯಾರಕರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದರು. ಶಾಲೆಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳ ಬಳಿಯೂ ಸಮಸ್ಯೆಗಳಿವೆ ಎಂದು ಅವರು ಗುರುತಿಸಿದ್ದಾರೆ.
ಚಾಲನಾ ಪರವಾನಗಿ ಪಡೆಯುವ ಪ್ರಕ್ರಿಯೆಯನ್ನು ಸುಲಭಗೊಳಿಸುವ ಬಗ್ಗೆ ಮಾತನಾಡಿದ ಗಡ್ಕರಿ, ಕಲಿಯುವವರ ಪರವಾನಗಿಗಾಗಿ ಮೊಬೈಲ್‌ನಲ್ಲೇ ಪರೀಕ್ಷೆ ಬರೆಯುವ ಅವಕಾಶ ನೀಡಲಾಗುವುದು ಎಂದು ತಿಳಿಸಿದರು. ಜನರು ಸಹಕರಿಸಲು ಕಲಿಯುವವರೆಗೆ ಬದಲಾವಣೆ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟ ಅವರು, ಈ ಅಭಿಯಾನದಲ್ಲಿ ಗಾಯಕ ಶಂಕರ್ ಮಹಾದೇವನ್ ಮತ್ತು ನಟ ಅಮಿತಾಭ್ ಬಚ್ಚನ್ ಸಹಾಯ ಮಾಡಿದ್ದಾರೆ ಎಂದರು.
ಇ-ರಿಕ್ಷಾಗಳ ಬಗ್ಗೆ ಮಾತನಾಡಿದ ಅವರು, ಇದು ಬಡವರಿಗಾಗಿದ್ದು, ಪರಿಸರ ಸ್ನೇಹಿಯಾಗಿದೆ. ಇದರ ಬೆಲೆಯನ್ನು 1.5 ಲಕ್ಷದಿಂದ 80 ಸಾವಿರಕ್ಕೆ ಇಳಿಸಲಾಗಿದೆ. ಈಗ ದೊಡ್ಡ ಕಂಪನಿಗಳೂ ಇ-ರಿಕ್ಷಾ ತಯಾರಿಸುತ್ತಿವೆ. ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಖರೀದಿಸಬೇಡಿ ಎಂದು ಸಲಹೆ ನೀಡಿದ ಅವರು, ಎಲೆಕ್ಟ್ರಿಕ್, ಹೈಡ್ರೋಜನ್ ಮತ್ತು ಫ್ಲೆಕ್ಸ್ ಎಂಜಿನ್ ವಾಹನಗಳತ್ತ ಗಮನಹರಿಸಲು ತಿಳಿಸಿದರು. ಹೈಡ್ರೋಜನ್ ಭವಿಷ್ಯದ ಇಂಧನವಾಗಿದ್ದು, ಭಾರತ ಶೀಘ್ರದಲ್ಲೇ ಇಂಧನ ರಫ್ತು ಮಾಡುವ ದೇಶವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸಲು ಸರ್ಕಾರ ಬದ್ಧವಾಗಿದೆ ಎಂದರು.
ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಅಂಡರ್‌ಗ್ರೌಂಡ್ ಟನಲ್ ನಿರ್ಮಿಸುವ ಚಿಂತನೆ ಇದೆ ಎಂದು ಕರ್ನಾಟಕ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ ವಿಷಯವನ್ನು ಗಡ್ಕರಿ ಹಂಚಿಕೊಂಡರು. ರಾಜಕೀಯವನ್ನು ಬದಿಗಿಟ್ಟು ಎಲ್ಲರಿಗೂ ಕೆಲಸ ಮಾಡುವುದು ತಮ್ಮ ಗುರಿಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.