ಬೆಂಗಳೂರು : ಕೊಲೆ ಬೆದರಿಕೆ ಕೇಸ್ ಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ದೂರುದಾರ ನಟ ಪ್ರಥಮ್, ಮಹೇಶ್ ಗೆ ಪೊಲೀಸರು ನೋಟಿಸ್ ನೀಡಿದ್ದಾರೆ.
ದೊಡ್ಡಬಳ್ಳಾಪುರ ಪೊಲೀಸರು ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು, ಸಾಕ್ಷಗಳ ಹೆಚ್ಚಿನ ಮಾಹಿತಿ ಕಲೆಹಾಕಲು ಇಬ್ಬರನ್ನು ಠಾಣೆಗೆ ಬರುವಂತೆ ಸೂಚಿಸಿದ್ದಾರೆ. ಮಹೇಶ್ ಹಾಗೂ ಪ್ರಥಮ್ ಇಬ್ಬರನ್ನು ಪೊಲೀಸರು ಪ್ರತ್ಯೇಕವಾಗಿ ವಿಚಾರಣೆ ನಡೆಸಲಿದ್ದಾರೆ.
ಪ್ರಥಮ್ ದೂರು..!
ಜುಲೈ 22 ರಂದು ಮಹೇಶ್ ಎಂಬ ಸಿನಿಮಾ ಪ್ರೊಮೋಟರ್ ನನಗೆ ದೊಡ್ಡಬಳ್ಳಾಪುರದ ಯಲ್ಲಮ್ಮ ದೇವಸ್ಥಾನದ ಪೂಜೆಗೆ ಕರೆದಿದ್ದರು. ಪೂಜೆ ಮುಗಿಸಿ ನಾನು ವಾಪಸ್ ಬರುವ ವೇಳೆ ಯಶಸ್ವಿನಿ ಮತ್ತು ಬೇಕರಿ ರಘು ಹಾಗೂ ಒಂದಷ್ಟು ಜನ ನನ್ನ ಕಾರನ್ನು ಸುತ್ತುವರೆದು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದರು. ದರ್ಶನ್ ಅವರನ್ನ ಕುರಿತು ನನ್ನ ಬಾಸ್ ಬಗ್ಗೆ, ಮಾತನಾಡಿದ್ದೀಯ ಅಂತ ಅವಾಚ್ಯ ಶಬ್ದಗಳಿಂದ ಬೈಯ್ದು, ಡ್ರ್ಯಾಗರ್ ಮತ್ತು ಚಾಕು ತೋರಿಸಿ ಚುಚ್ಚಲು ಮುಂದಾಗಿ ಭಯಪಡಿಸಿರುತ್ತಾರೆ ಎಂದು ದೂರು ನೀಡಿದ್ದರು.