ಮುಂಬೈ: ಕೈಬರಹ ಚೆನ್ನಾಗಿಲ್ಲ ಎಂದು ಶಿಕ್ಷಕಿಯೊಬ್ಬರು 8 ವರ್ಷದ ಬಾಲಕನ ಕೈ ಸುಟ್ಟ ಆಘಾತಕಾರಿ ಘಟನೆ ನಡೆದಿದೆ.
ಮುಂಬೈನ ಮಲಾಡ್ ಪ್ರದೇಶದ ಖಾಸಗಿ ಟ್ಯೂಷನ್ ಶಿಕ್ಷಕಿಯೊಬ್ಬರು ಎಂಟು ವರ್ಷದ ಬಾಲಕನ ಕೈಯನ್ನು ಸುಟ್ಟ ಆರೋಪದ ಮೇಲೆ ಬಂಧಿತರಾಗಿದ್ದಾರೆ. ರಾಜಶ್ರೀ ರಾಥೋಡ್ ಬಂಧಿತ ಶಿಕ್ಷಕಿ. ಉರಿಯುತ್ತಿರುವ ಮೇಣದಬತ್ತಿಯನ್ನು ಬಳಸಿ ಗಾಯಗೊಳಿಸಿದ್ದರಿಂದ ಮಗುವಿನ ಕೈ ತೀವ್ರವಾಗಿ ಸುಟ್ಟುಹೋಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಗೋರೆಗಾಂವ್ ಮೂಲದ ಶಾಲೆಯಲ್ಲಿ ಮೂರನೇ ತರಗತಿಯ ವಿದ್ಯಾರ್ಥಿಯಾಗಿದ್ದ ಬಾಲಕ ಮಲಾಡ್‌ನ ಜೆಪಿ ಡೆಕ್ಸ್ ಕಟ್ಟಡದಲ್ಲಿರುವ ಶಿಕ್ಷಕರ ನಿವಾಸದಲ್ಲಿ ನಿಯಮಿತವಾಗಿ ಟ್ಯೂಷನ್‌ಗೆ ಹಾಜರಾಗುತ್ತಿದ್ದ. ಘಟನೆಯ ನಡೆದ ದಿನ ಅವನ ಸಹೋದರಿ ಅವನನ್ನು ಟ್ಯೂಷನ್ ಗೆ ಬಿಟ್ಟಿದ್ದಳು. ನಂತರ ಶಿಕ್ಷಕಿ ಸಹೋದರಿಗೆ ಕರೆ ಮಾಡಿ ಅವನನ್ನು ಕರೆದುಕೊಂಡು ಹೋಗುವಂತೆ ಹೇಳಿದ್ದಾಳೆ.
ಸಹೋದರಿ ಬಂದಾಗ, ತನ್ನ ಸಹೋದರ ಕಣ್ಣೀರು ಹಾಕುತ್ತಾ ನಿಂತಿದ್ದನ್ನು ಕಂಡಿದ್ದು, ಅವನ ಬಲಗೈ ಸುಟ್ಟು ಹೋಗಿರುವುದು ಕಂಡು ಬಂದಿದೆ. ಶಿಕ್ಷಕಿಯನ್ನು ವಿಚಾರಿಸಿದಾಗ, ರಾಜಶ್ರೀ ಕೇವಲ ನಾಟಕ ಎಂದು ತಳ್ಳಿಹಾಕಿದ್ದಾರೆ. ಮನೆಗೆ ಹಿಂದಿರುಗಿದ ನಂತರ, ಶಿಕ್ಷಕಿ ತನ್ನ ಕೈಬರಹ ಕಳಪೆಯಾಗಿದೆ ಎಂದು ಉರಿಯುತ್ತಿರುವ ಮೇಣದಬತ್ತಿಯ ಮೇಲೆ ತನ್ನ ಕೈಯನ್ನು ಒತ್ತಿ ಹಿಡಿದು ಸುಟ್ಟಿರುವುದಾಗಿ ಬಾಲಕ ತಿಳಿಸಿದ್ದಾನೆ.
ತಂದೆ ಬಾಲಕನ್ನು ಚಿಕಿತ್ಸೆಗಾಗಿ ಕಾಂಡಿವಲಿಯ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ಕರೆದೊಯ್ದರು. ನಂತರ ಅವರು ಕುರಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಪ್ರಾಪ್ತ ವಯಸ್ಕನ ಮೇಲೆ ದೈಹಿಕ ಮತ್ತು ಮಾನಸಿಕ ಕ್ರೌರ್ಯಕ್ಕಾಗಿ ಭಾರತೀಯ ದಂಡ ಸಂಹಿತೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಶಿಕ್ಷಕಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು. ಪ್ರಾಥಮಿಕ ವಿಚಾರಣೆಯ ನಂತರ, ಆರೋಪಿಯನ್ನು ಬಂಧಿಸಲಾಗಿದೆ.