ಆಂಬುಲೆನ್ಸ್‌‌ ನಿಂದಲೇ ಹತ್ತನೇ ತರಗತಿ ಪರೀಕ್ಷೆ ಬರೆದ ದಿಟ್ಟ ಬಾಲೆ

’ಹತ್ತನೇ ತರಗತಿ ಮಂಡಳಿ ಪರೀಕ್ಷೆಗೆ ಹತ್ತು ದಿನಗಳ ಮುಂಚೆ ಅಫಘಾತವಾಗಿ ಗಾಯಗೊಂಡುಬಿಟ್ಟರೆ!’ ಎಂಬ ಊಹೆಯೇ ಸಾಕು ಯಾವ ವಿದ್ಯಾರ್ಥಿಗೂ ಬೆಚ್ಚಿ ಬೀಳುವಂತೆ ಮಾಡಲು. ಆದರೆ ಇಲ್ಲೊಬ್ಬ ವಿದ್ಯಾರ್ಥಿನಿಗೆ ಅಪಘಾತದ ಕಾರಣದಿಂದ ಪರೀಕ್ಷೆ ತಪ್ಪಬಾರದು ಎಂದು ಎರಡು ಶಾಲೆಗಳು ಹಾಗೂ ರಾಜ್ಯ ಪರೀಕ್ಷಾ ಮಂಡಳಿ ಅಧಿಕಾರಿಗಳು ತೆಗೆದುಕೊಂಡ ವಿಶಿಷ್ಟ ಕ್ರಮವು ನೆಟ್ಟಿಗರ ಮೆಚ್ಚುಗೆಗೆ ಭಾಜನವಾಗಿದೆ.

ಹತ್ತನೇ ವಿದ್ಯಾರ್ಥಿಯೊಬ್ಬಳು ಎರಡು ಗಂಟೆಗಳ ಕಾಲ ಆಂಬುಲೆನ್ಸ್ ಒಳಗೆ ಮಲಗಿದ್ದ ಸ್ಥಿತಿಯಲ್ಲೇ ಪರೀಕ್ಷೆ ಬರೆದಿದ್ದಾಳೆ. ಇದೇ ವೇಳೆ ಪರೀಕ್ಷೆ ಮೇಲ್ವಿಚಾರಕರು ಅದೇ ಆಂಬುಲೆನ್ಸ್‌ನಲ್ಲಿ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ.

ಮುಂಬಯಿಯ ಬಾಂದ್ರಾದ ಅಂಜುಮ್-ಏ-ಇಸ್ಲಾಮ್‌ನ ಡಾ. ಎಂಐಜೆ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿ, 15 ವರ್ಷ ವಯಸ್ಸಿನ ಮುಬಶಿರಾ ಸಯ್ಯದ್ ಈ ಗಟ್ಟಿಗಿತ್ತಿಯಾಗಿದ್ದಾಳೆ. ವಿಜ್ಞಾನ ವಿಷಯದ ಎರಡನೇ ಪತ್ರಿಕೆಯ ಪರೀಕ್ಷೆಯಲ್ಲಿ ಹಾಜರಾಗಿ ಮನೆಗೆ ಮರಳುತ್ತಿದ್ದ ಸಂದರ್ಭದಲ್ಲಿ ಅಪಘಾತಕ್ಕೀಡಾದ ಮುಬಶಿರಾಗೆ ಕಾರಿನ ಚಕ್ರಗಳು ಆಕೆಯ ಎಡಗಾಲಿನ ಮೇಲೆ ಹರಿದು ಹೋಗಿವೆ. ಕೂಡಲೇ ಕಾರಿನ ಚಾಲಕ ಹಾಗೂ ಮುಬಶಿರಾ ಗೆಳತಿಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಎರಡು ವಾರಗಳ ಮಟ್ಟಿಗೆ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ ವೈದ್ಯರು ಆಕೆಯನ್ನು ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಿದ್ದಾರೆ.

ಇದೀಗ ಈ ವಿಶೇಷ ವ್ಯವಸ್ಥೆಯಲ್ಲಿ ತನ್ನ ಪರೀಕ್ಷೆಗಳನ್ನು ಬರೆಯುತ್ತಿರುವ ಮುಬಶಿರಾ ಮಾರ್ಚ್ 23 (ವಿಜ್ಞಾನ 1) ಹಾಗೂ ಮಾರ್ಚ್ 25 (ಸಮಾಜ ವಿಜ್ಞಾನ 2) ಪತ್ರಿಕೆಗಳನ್ನು ಇದೇ ರೀತಿ ಬರೆಯಲಿದ್ದಾಳೆ.

ಮುಬಶಿರಾಗೆ ಆಕೆಯ ತರಗತಿ ಶಿಕ್ಷಕ ಡಾ ಸನಂ ಶೇಯ್ಖ್‌ ಹಾಗೂ ಇತರೆ ಶಿಕ್ಷಕರು ಈ ವ್ಯವಸ್ಥೆ ಮಾಡಲು ನೆರವಾಗಿದ್ದಾರೆ. ಇದೇ ರೀತಿ ಆಕೆ ಸೋಮವಾರದಂದು ವಿಜ್ಞಾನ 2 (ಜೀವಶಾಸ್ತ್ರ) ಪರೀಕ್ಷೆ ಬರೆದಿದ್ದಾಳೆ. ಮುಬಶಿರಾ ಹೇಳುವ ಉತ್ತರಗಳನ್ನು ಆಕೆಯ ಪರವಾಗಿ ಒಂಬತ್ತನೇ ತರಗತಿ ವಿದ್ಯಾರ್ಥಿನಿ ನೂರ್‌ಸಬಾ ಅನ್ಸಾರಿ (14) ಉತ್ತರ ಪತ್ರಿಕೆಯಲ್ಲಿ ಬರೆಯುತ್ತಿದ್ದಾಳೆ.

ಸೇಂಟ್ ಸ್ಟಾನಿಸ್ಲೌಸ್‌ ಸಂಸ್ಥೆಯ ಪ್ರಾಂಶುಪಾಲೆ ಸಿಸ್ಟರ್‌ ಅರೋಕ್ಕಿಮ್ಮಳಾ ಆಂತೋನಿ ಈ ಇಬ್ಬರೂ ಬಾಲಕಿಯರಿಗೆ ವಿಶೇಷ ಪರೀಕ್ಷಾ ಮೇಲ್ವಿಚಾರಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮುಬಶಿರಾ ಚಿಕಿತ್ಸೆಗೆ ತಗುಲುವ ವೆಚ್ಚಗಳನ್ನು ಭರಿಸಲು ಆಕೆಯ ಶಿಕ್ಷಕರು ಹಣ ಸಂಗ್ರಹಿಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read