ಬೆಂಗಳೂರು: ರಾಜ್ಯದ ಬಹುಮಹಡಿ ಕಟ್ಟಡಗಳಿಗೆ ಶೇಕಡ 1ರಷ್ಟು ಅಗ್ನಿ ಸೆಸ್ ವಿಧಿಸಲು ಅವಕಾಶ ಕಲ್ಪಿಸುವ ಕರ್ನಾಟಕ ಅಗ್ನಿಶಾಮಕ ದಳ ತಿದ್ದುಪಡಿ ಮಸೂದೆ 2025 ಕ್ಕೆ ವಿಧಾನ ಮಂಡಲದ ಉಭಯ ಸದನಗಳಲ್ಲಿ ಅನುಮೋದನೆ ದೊರೆತಿದೆ.
21 ಮೀಟರ್ ಗಿಂತಲೂ ಹೆಚ್ಚು ಎತ್ತರದ ಬಹುಮಹಡಿ ಕಟ್ಟಡಗಳಿಗೆ ಅವುಗಳ ತೆರಿಗೆಯ ಮೇಲೆ ಶೇಕಡ 1ರಷ್ಟು ಅಗ್ನಿ ಸೆಸ್ ವಿಧಿಸಲು ಈ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ರಾಜ್ಯಪಾಲರ ಅಂಕಿತ ದೊರೆತ ನಂತರ ಕಾಯ್ದೆಯಾಗಿ ಜಾರಿಯಾಗಲಿದೆ. ಬಳಿಕ ಬಹುಮಹಡಿ ಕಟ್ಟಡಗಳ ಮಾಲೀಕರಿಗೆ ತೆರಿಗೆ ಹೊರೆ ಹೆಚ್ಚಾಗಲಿದೆ.
ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ವಿಧಾನ ಪರಿಷತ್ ನಲ್ಲಿ ಮಸೂದೆ ಮಂಡಿಸಿದಾಗ ಅಗ್ನಿ ಸೆಸ್ ವಿಧಿಸಲು ವಿಪಕ್ಷಗಳ ಸದಸ್ಯರು ಆಕ್ಷೇಪಿಸಿದ್ದಾರೆ. ಎಲ್ಲದಕ್ಕೂ ಈ ಸರ್ಕಾರ ತೆರಿಗೆ ವಿಧಿಸುತ್ತಿದೆ. ಗಾಳಿಗೆ ತೆರಿಗೆ ವಿಧಿಸುವುದೊಂದೇ ಬಾಕಿ ಇದೆ ಎಂದು ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.