ಬೆಂಗಳೂರು: ಪತಿಯನ್ನು ಬಿಟ್ಟು ಬಂದು ಲಿವಿನ್ ರಿಲೇಶನ್ ನಲ್ಲಿದ್ದ ಪ್ರೇಯಸಿಗಾಗಿ ಮೊಬೈಲ್ ಕಳ್ಳತನಕ್ಕಿಳಿದ ಪ್ರಿಯಕರ ಸೇರಿ ಮೂವರನ್ನು ಬೆಂಗಳೂರಿನ ವರ್ತೂರು ಪೊಲೀಸರು ಬಂಧಿಸಿದ್ದಾರೆ.
ದಿವಾಸ್ ಕಮಿ, ಅರೋಹನ್ ತಪಾ ಹಾಗೂ ಅಸ್ಮಿತಾ ಬಂಧಿತ ಆರೋಪಿಗಳು. ಅಸ್ಮಿತಾ ತನ್ನ ಪತಿಯನ್ನು ಬಿಟ್ಟು ಪ್ರಿಯಕರ ದಿವಾಸ್ ಕಮಿ ಜೊತೆ ವರ್ತೂರಿನಲ್ಲಿ ವಾಸವಾಗಿದ್ದಳು. ಕಡಿಮೆ ಸಮಯದಲ್ಲಿ ಹೆಚ್ಚಿನ ಹಣಗಳಿಸಲೆಂದು ಈ ಜೋಡಿ ಪಕ್ಕಾ ಪ್ಲಾನ್ ಮಾಡಿ ಮೊಬೈಲ್ ಕಳ್ಳತನ ಮಾಡುತ್ತಿದ್ದರು. ದಿವಾಸ್ ತನ್ನ ಸ್ನೇಹಿತ ಅರೋಹನ್ ಜೊತೆ ಸೇರಿಕೊಂಡು ಮೊಬೈಲ್ ಕಳ್ಳತನ ಮಾಡುತ್ತಿದ್ದ. ಹೀಗೆ ಕದ್ದು ತಂದ ಮೊಬೈಲ್ ಗಳನ್ನು ಅಸ್ಮಿತಾ ಮಾರಾಟ ಮಾಡುತ್ತಿದ್ದಳು.
ಮೊಬೈಲ್ ಕಳ್ಳತನ ಮಾಡುತ್ತಿದ್ದ ಈ ಗ್ಯಾಂಗ್ ಎರಡು ಮೊಬೈಲ್ ಶೋ ರೂಂ ಗಳಿಗೆ ಲಗ್ಗೆಯಿಟ್ಟು ಮೊಬೈಲ್ ಗಳನ್ನು ಕದ್ದಿದ್ದರು. ಮತ್ತೊಂದು ಸೋ ರೂಂ ಗೆ ಕಳ್ಳತನಕ್ಕಾಗಿ ಹೊಂಚುಹಾಕಿದ್ದರು. ಶೋ ರೂಂ ನಲ್ಲಿದ್ದ ಮೊಬೈಲ್ ಗಳು ನಾಪತ್ತೆಯಾಗಿದ್ದ ಬಗ್ಗೆ ವರ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತಕ್ಷಣ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ 30 ಲಕ್ಷ ಮೌಲ್ಯದ 25ಕ್ಕೂ ಹೆಚ್ಚು ಮೊಬೈಲ್ ಹಾಗೂ ಒಂದು ವಾಚ್ ವಶಕ್ಕೆ ಪಡೆದಿದ್ದಾರೆ.
