ದಾವಣಗೆರೆ: ಜಗಳೂರು ಪಟ್ಟಣದ ಮುಖ್ಯ ರಸ್ತೆಯಲ್ಲಿ ಬೀಡಾಡಿ ಎಮ್ಮೆ ಗುದ್ದಿದ್ದರಿಂದ ಗಾಯಗೊಂಡಿದ್ದ ವ್ಯಕ್ತಿಯನ್ನು ಶಾಸಕ ಬಿ. ದೇವೇಂದ್ರಪ್ಪ ತಮ್ಮ ಕಾರ್ ನಲ್ಲಿಯೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.
ಕೂಡ್ಲಿಗಿ ತಾಲೂಕಿನ ಹುಲಿಕೆರೆ ಗ್ರಾಮದ ಶರಣಪ್ಪ ಗಾಯಗೊಂಡ ವ್ಯಕ್ತಿ. ಕೆಲಸದ ನಿಮಿತ್ತ ಜಗಳೂರಿಗೆ ಬೈಕ್ ನಲ್ಲಿ ಬಂದಿದ್ದ ಅವರಿಗೆ ರಸ್ತೆಯ ನಡುವೆ ಬೀಡಾಡಿ ದನಗಳ ಹಿಂಡಿನಲ್ಲಿದ್ದ ಎಮ್ಮೆಯೊಂದು ಜೋರಾಗಿ ಓಡಿ ಬಂದು ಬೈಕ್ ಗೆ ಗುದ್ದಿದೆ. ಇದರ ಪರಿಣಾಮ ರಸ್ತೆಗೆ ಬಿದ್ದು ತೀವ್ರ ರಕ್ತಸ್ರಾವವಾಗಿ ಶರಣಪ್ಪ ನರಳುತ್ತಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ಗಾಗಿ ಕಾಯುತ್ತಿದ್ದ ವೇಳೆಯಲ್ಲಿ ಅದೇ ಮಾರ್ಗವಾಗಿ ಶಾಸಕ ಬಿ. ದೇವೇಂದ್ರಪ್ಪ ಆಗಮಿಸಿದ್ದಾರೆ,
ಮಾಹಿತಿ ತಿಳಿದ ಶಾಸಕರು ಕೂಡಲೇ ಗಾಯಾಳು ಶರಣಪ್ಪನನ್ನು ತಮ್ಮ ಕಾರ್ ನಲ್ಲಿಯೇ ಕೂರಿಸಿಕೊಂಡು ಜಗಳೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಸಂಬಂಧಿಕರಿಗೆ ಕರೆ ಮಾಡಿ ಮಾಹಿತಿ ನೀಡಿ ಶರಣಪ್ಪ ಆರೋಗ್ಯವಾಗಿದ್ದಾರೆ ಎಂದು ಧೈರ್ಯ ಹೇಳಿದ್ದಾರೆ.