ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಬೀದಿ ನಾಯಿಗಳಿಗೆ ಕಾಂಗ್ರೆಸ್ ಸರ್ಕಾರ ಬಾಡೂಟ ಕಲ್ಪಿಸಲು ಮುಂದಾಗಿದೆ.
ಬೀದಿ ನಾಯಿಗಳಿಗೆ ಮಾಂಸ, ಚಿಕನ್, ಎಗ್ ರೈಸ್ ನೀಡಲು ಬಿಬಿಎಂಪಿ ಮುಂದಾಗಿದೆ. ಪಾಲಿಕೆಯ 8 ವಲಯಗಳಲ್ಲಿ ಪ್ರತಿದಿನ 600 ರಿಂದ 700 ಬೀದಿ ನಾಯಿಗಳಿಗೆ ಬಾಡೂಟ ನೀಡಲು ಬಿಬಿಎಂಪಿ 2.80 ಕೋಟಿ ರೂ. ಟೆಂಡರ್ ಕರೆದಿದೆ. ಬಿಬಿಎಂಪಿಯ ಈ ಕ್ರಮಕ್ಕೆ ತೆರಿಗೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರ ತೆರಿಗೆಯ ಹಣವನ್ನು ಈ ರೀತಿ ಬೀದಿ ನಾಯಿಗಳಿಗೆ ಬಾಡೂಟ ಹಾಕಲು ಪೋಲು ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿಯಿಂದ ಬೀದಿ ನಾಯಿಗಳಿಗೆ ಚಿಕನ್ ಹಾಕುವ ಕ್ರಮಕ್ಕೆ ಶಾಸಕ ಸಿ.ಕೆ. ರಾಮಮೂರ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೆರಿಗೆ ಹಣ ಬೀದಿ ನಾಯಿಗಳಿಗೆ ಹಾಕುತ್ತಿರುವುದು ದುರ್ದೈವದ ಸಂಗತಿಯಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಬೀದಿ ನಾಯಿಗಳ ಉಪಟಳದಿಂದ ಜನರಿಗೆ ತೊಂದರೆ ಆಗುತ್ತಿದೆ. ಯಾರೂ ಹೇಳಿದ್ದಾರೆ ಎಂದು ಚಿಕನ್ ನೀಡುವುದು ಸರಿಯಲ್ಲ. ಬೀದಿ ನಾಯಿಗಳು ಮಕ್ಕಳಿಗೆ ಕಚ್ಚುತ್ತವೆ. ಹಿಂಸೆ ಮಾಡುತ್ತವೆ. ಬೀದಿ ನಾಯಿಗಳಿಗೆ ಚಿಕನ್ ಹಾಕುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.