ಕಾರವಾರ: ಕಡಿಮೆ ಅಂಕ ಪಡೆದಿದ್ದಕ್ಕೆ ಪೋಷಕರು ಬೈದರು ಎಂಬ ಕಾರಣಕ್ಕೆ ಮನನೊಂದು ಮನೆ ಬಿಟ್ಟು ಹೋಗಿದ್ದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಇಬ್ಬರು ಮಕ್ಕಳು ಮುಂಬೈನಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.
ಶಿರಸಿಯ ಕಸ್ತೂರಬಾ ನಗರದ ನಿವಾಸಿಗಳಾದ ಶ್ರೀಶಾ (13) ಪರಿಧಿ (10) ಮುಂಬೈನಲ್ಲಿ ಪತ್ತೆಯಾಗಿರುವ ಮಕ್ಕಳು. ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಪೋಷಕರು ಬೈದಿದ್ದರು. ಅಲ್ಲದೇ ಸರಿಯಾಗಿ ಓದುವಂತೆ ಒತ್ತಡ ಹಾಕಿದ್ದರು. ಇದರಿಂದ ಬೇಸರಗೊಂಡ ಮಕ್ಕಳಿಬ್ಬರೂ ಮನೆ ತೊರೆದಿದ್ದಾರೆ. ಆಗಸ್ಟ್ 16ರಿಂದ ಮಕ್ಕಳು ನಾಪತ್ತೆಯಾಗಿದ್ದರು. ಕಂಗಾಲಾದ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.
ಹುಬ್ಬಳ್ಳಿಗೆ ತೆರಳಿ ಅಲ್ಲಿಂದ ಪುಣೆಗೆ ಹೋಗಿದ್ದಾರೆ. ಅಲ್ಲಿಂದ ಮುಂಬೈ ಮಹಾನಗರಿಗೆ ತೆರಳಿದ್ದಾರೆ. ಮಕ್ಕಳು ಬಸ್ ಗಳಲ್ಲಿ ಪ್ರಯಾಣಿಸಿರುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿತ್ತು. ಸಿಸಿಕ್ಯಾಮರಾ ಆಧಾರದ ಮೇಲೆ ಮಕ್ಕಳ ಬಗ್ಗೆ ಶಿರಸಿ ಪೊಲೀಸರು ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮುಂಬೈನಲ್ಲಿ ಬಸ್ ನಿಲ್ದಾಣದಲ್ಲಿ ಇಳಿದ ಮಕ್ಕಳು ಶಿರಡಿಗೆ ಹೋಗಬೇಕು ಎಂದು ಸಾರ್ವಜನಿಕರಲ್ಲಿ ಹಣ ಕೇಳುತ್ತಿದ್ದರು. ಅನುಮಾನಗೊಂಡ ಸ್ಥಳೀಯ ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ. ಯಾವ ಊರಿಂದ ಬಂದಿದ್ದೀರಿ ಎಂದು ವಿಚಾರಿಸಿದಾಗ ಮಕ್ಕಳು ಶಿರಸಿಯಿಂದ ಎಂದು ಬಾಯ್ಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಶಿರಸಿ ಪೊಲೀಸರಿಗೆ ಮಕ್ಕಳು ಪತ್ತೆಯಾಗಿದ್ದಾಗಿ ಮಾಹಿತಿ ನೀಡಿದ್ದಾರೆ. ಸದ್ಯ ಮಕ್ಕಳನ್ನು ಮುಂಬೈನಿಂದ ಶಿರಸಿಗೆ ಕರೆತರಲಾಗುತ್ತಿದೆ.