ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ 2025-26ನೇ ಸಾಲಿಗೆ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ನೀಡಲು ಉದ್ದೇಶಿಸಲಾಗುತ್ತಿದ್ದು, ಮತೀಯ ಅಲ್ಪಸಂಖ್ಯಾತರಿಂದ (ಮುಸ್ಲಿಂ, ಕ್ರಿಶ್ಚಿಯನ್, ಜೈನರು, ಬೌದ್ಧರು, ಸಿಖ್ಖರು, ಪಾರ್ಸಿ ಜನಾಂಗದವರಿದ) ಆನ್-ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ವಿವಿಧ ಯೋಜನೆಗಳು:
ಶ್ರಮಶಕ್ತಿ ಸಾಲದ ಯೋಜನೆ: ಈ ಯೋಜನೆಯಡಿ ರೂ.50 ಸಾವಿರಗಳ ಒಳಗೆ ಶೇ.4ರಷ್ಟು ಬಡ್ಡಿ ದರದಲ್ಲಿ ಶೇ.50 ಸಾಲ ಹಾಗೂ ಶೇ.50 ಸಹಾಯಧನ ನೀಡಲಾಗುವುದು.
ಸ್ವಾವಲಂಬಿ ಸಾರಥಿ ಯೋಜನೆ: ಈ ಯೋಜನೆಯಲ್ಲಿ ಟ್ಯಾಕ್ಸಿ/ಗೂಡ್ಸ್ ವಾಹನ/ಪ್ಯಾಸೆಂಜರ್ ಆಟೋರಿಕ್ಷಾ ಖರೀದಿಸಲು ಫಲಾನುಭವಿಗಳಿಗೆ ಬ್ಯಾಂಕ್ನಿಂದ ಸಾಲ ಮಂಜೂರಾತಿಯಾಗಿದ್ದಲ್ಲಿ, ನಿಗಮದಿಂದ ವಾಹನದ ಮೌಲ್ಯದ ಶೇ.50ರಷ್ಟು ಸಹಾಯಧನ ಗರಿಷ್ಠ ರೂ.3 ಲಕ್ಷ ನೀಡಲಾಗುವುದು.
ವಿದೇಶ ವ್ಯಾಸಂಗಕ್ಕೆ ಸಾಲ ಯೋಜನೆ: ಅಲ್ಪಸಂಖ್ಯಾತರ ವರ್ಗದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ವ್ಯಾಸಂಗ ಮಾಡಲು ಮಾನ್ಯತೆ ಪಡೆದಿರುವ ಯಾವುದೇ ವಿದೇಶ ವಿಶ್ವ ವಿದ್ಯಾಲಯದಿಂದ ಪದವಿ, ಸ್ನಾತಕೋತ್ತರ ಪದವಿ, ವಿಧ್ಯಾಭ್ಯಾಸ ಪಡೆಯಲು ರೂ.20 ಲಕ್ಷದವರೆಗೆ ಸಾಲವನ್ನು ನಿಗಮಕ್ಕೆ ಆಸ್ತಿಯ (ಕಟ್ಟಡ/ಜಮೀನು) ಅಡಮಾನದ ಮೇಲೆ ಮಾತ್ರ ಒದಗಿಸಲಾಗುವುದು.
ವೃತ್ತಿ ಪ್ರೋತ್ಸಾಹ ಯೋಜನೆ: ಅಲ್ಪಸಂಖ್ಯಾತರ ಸಮುದಾಯದ ಜನರಿಗೆ, ಹಣ್ಣು, ಹಂಪಲು, ಕೋಳಿ ಮತ್ತು ಮೀನು ಮಾರಾಟ, ಏಳನೀರು, ಕಬ್ಬೀನ ಹಾಲು, ತಂಪು ಪಾನೀಯ ಮಾರಾಟ, ಬೇಕರಿ, ಲ್ಯಾಂಡರಿ, ಡ್ರೆöÊ ಕ್ಲೀನಿಂಗ್, ಆಟಿಕೆ ಗೊಂಬೆ ತಯಾರಿಕೆ ಇತ್ಯಾದಿ ಚಟುವಟಿಕೆಗಳನ್ನು ಪ್ರಾರಂಭಿಸಲು ಅಥವಾ ಅಭಿವೃದ್ಧಿ ಪಡಿಸಲು ನಿಗಮದಿಂದ ಶೇ.50 ಸಹಾಯಧನದೊಂದಿಗೆ ರೂ.1 ಲಕ್ಷ ಸಾಲ ನೀಡಲಾಗುವುದು.
ಅಲ್ಪಸಂಖ್ಯಾತರ ಸಮುದಾಯದ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಸಹಾಯಧನ ಯೋಜನೆ: ಅಲ್ಪಸಂಖ್ಯಾತರ ಸಮುದಾಯದ ಸ್ವ-ಸಹಾಯ ಗುಂಪುಗಳಿಗೆ ವಿವಿಧ ರೀತಿಯ ಸ್ವಯಂ ಉದ್ಯೋಗ ಚಟುವಟಿಕೆಯಲ್ಲಿ ತೊಡಗಿಸಿ ಅವರನ್ನು ಆರ್ಥಿಕ ಸ್ವಾವಲಂಭಿಯನ್ನಾಗಿ ಮಾಡುವ ಸಲುವಾಗಿ ರಾಷ್ಟ್ರೀಕೃತ/ಶೆಡ್ಯೂಲ್ ಬ್ಯಾಂಕ್/ಆರ್ಬಿಐ ನಿಂದ ಮಾನ್ಯತೆ ಪಡೆದ ವಿವಿಧ ಆರ್ಥಿಕ ಸಂಸ್ಥೆಗಳಿಂದ ಪಡೆಯುವ ಸಾಲಕ್ಕೆ ಘಟಕ ವೆಚ್ಚದ ಶೇ.50 ಅಥವಾ ಗರಿಷ್ಠ ರೂ.02 ಲಕ್ಷ ಸಹಾಯಧನವನ್ನು ನಿಗಮದಿಂದ ಒದಗಿಸಲಾಗುವುದು. ಸಹಾಯಧನವು ಬ್ಯಾಕ್ ಎಂಡ್ ಸಬ್ಸಿಡಿಯಾಗಿದ್ದು, ಸ್ವ-ಸಹಾಯ ಸಂಘಗಳ ಆರ್ಥಿಕ ಬ್ಯಾಂಕ್ ಗಳಿಂದ ಪಡೆದ ಸಾಲದ ಮರುಪಾವತಿಗೆ ಹೊಂದಾಣಿಕೆ ಮಾಡಲಾಗುವುದು.
ರೇಷ್ಮೆ ನೂಲು ಬಿಚ್ಚಾಣಿಕೆ ಉದ್ಯಮಕ್ಕೆ ಪ್ರೋತ್ಸಾಹ ಯೋಜನೆ: ರೇಷ್ಮೆ ನೂಲು ಬಿಚ್ಚಾಣಿಕೆಯಲ್ಲಿ ತೊಡಗಿರುವ ಅಲ್ಪಸಂಖ್ಯಾತ ಫಲಾನುಭವಿಗಳನ್ನು ಪ್ರೋತ್ಸಾಹಿಸಿ ಅವರ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ ಅಗತ್ಯವಿರುವ ದುಡಿಮೆ ಬಂಡವಾಳ ಮತ್ತು ಮೂಲಭೂತ ಸೌಕರ್ಯವನ್ನು ಒದಗಿಸಲು ನಿಗಮದಿಂದ ರೂ.02 ಲಕ್ಷದ ವರೆಗೆ ಸಾಲ ಸಹಾಯಧನ ಒದಗಿಸಲಾಗುವುದು. ಇದರಲ್ಲಿ ಶೇ. 50 ಸಹಾಯಧನ ಆಗಿರುತ್ತದೆ.
ವ್ಯಾಪಾರ/ಉದ್ದಿಮೆ ನೇರಸಾಲ ಯೋಜನೆ: ಅಲ್ಪಸಂಖ್ಯಾತ ವರ್ಗದ ಜನರಿಗೆ ವ್ಯಾಪಾರ, ಉದ್ದಿಮೆ ಪ್ರಾರಂಭಿಸಲು ಅಥವಾ ಅಭಿವೃದ್ಧಿ ಪಡಿಸಿಕೊಳ್ಳುವ ಸಲುವಾಗಿ ಸಾಲವನ್ನು ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಲ್ಲಿ ವ್ಯಾಪಾರ/ಆರ್ಥಿಕ/ಸೇವಾಕ್ಷೇತ್ರ, ಕೃಷಿ ಆಧಾರಿತ ಚಟುವಟಿಕೆ ಕೈಗೊಳ್ಳಲು ರೂ.05 ಲಕ್ಷದಿಂದ ರೂ.20 ಲಕ್ಷಗಳವರೆಗೆ ಸಾಲ ಸೌಲಭ್ಯ ನೀಡಲಾಗುವುದು.ಸಾಂತ್ವನ ಯೋಜನೆ: ರಾಜ್ಯದಲ್ಲಿ ಕೋಮು ಗಲಭೆ ಮತ್ತು ಹಿಂಸಾಚಾರದ ಸಂದರ್ಭಗಳಲ್ಲಿ ಹಾಗೂ ಪರಿಸರ ವಿಕೋಪಗಳಿಂದ ವ್ಯಾಪಾರ ಕೇಂದ್ರಗಳು ಹಾಗೂ ವಾಸದ ಮನೆಗಳು ನಾಶ ಅಥವಾ ಹಾನಿಗೊಳಗಾಗಿದ್ದರೆ ಅಂತಹ ಪ್ರಕರಣಗಳಲ್ಲಿ ಕನಿಷ್ಠ ರೂ.02 ಲಕ್ಷ ನಷ್ಟವಾಗಿದ್ದರೆ ಸಾಲ ಸೌಲಭ್ಯ ಒದಗಿಸಲಾಗುವುದು.
ಮೇಲ್ಕಂಡಂತೆ ಎರಡು ವರ್ಗಗಳ ರಾಜ್ಯದಲ್ಲಿನ ವಿಶೇಷ/ದುರ್ಬಲ ವರ್ಗದ ಫಲಾನುಭವಿಗಳಿಗೆ ಗರಿಷ್ಠ 05 ಲಕ್ಷ ರೂ.ಗಳ ಘಟಕ ವೆಚ್ಚಕ್ಕೆ ಶೇ.50 ರಷ್ಟು ಸಹಾಯಧನ ಮತ್ತು ಶೇ.3ರ ಬಡ್ಡಿ ದರದಲ್ಲಿ ಶೇ.50 ರಷ್ಟು ಸಾಲ ಒದಗಿಸಲಾಗುವುದು.
ಅರ್ಹತೆಗಳು:
ಅರ್ಜಿದಾರರು ಜಿಲ್ಲೆಯ ಕನಿಷ್ಠ 15 ವರ್ಷದಿಂದ ಖಾಯಂ ನಿವಾಸಿಯಾಗಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ ರೂ.4.50 ಲಕ್ಷ ಮೀರಿರಬಾರದು. ಅರ್ಜಿದಾರರು ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 55 ವರ್ಷ ಹೊಂದಿರಬೇಕು. ಶೇ.33 ರಷ್ಟು ಮಹಿಳೆಯರಿಗೆ ಮೀಸಲಾತಿ ಇರುತ್ತದೆ. ಶೇ.3ರಷ್ಟು ಅಂಗವಿಕಲರಿಗೆ ಮೀಸಲಾತಿ ಇರುತ್ತದೆ.
ಅರ್ಜಿದಾರರು ತಮ್ಮ ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ರೇಷನ್ ಕಾರ್ಡ್, ಆಧಾರ್ ಕಾರ್ಡ್, ಗುರುತಿನ ಚೀಟಿ, ಬ್ಯಾಂಕ್ ಖಾತೆ ಪುಸ್ತಕ ಪ್ರತಿ, ಯೋಜನಾ ವರದಿ ಹಾಗೂ ಅರ್ಜಿದಾರರ ಹಾಗೂ ಜಾಮೀನುದಾರರ 2 ಭಾವಚಿತ್ರ ಸಲ್ಲಿಸಬೇಕು.
ಈ ಹಿಂದೆ ನಿಗಮದ ಸೌಲಭ್ಯವನ್ನು ಪಡೆದವರು ಮತ್ತೆ ಸೌಲಭ್ಯವನ್ನು ಪಡೆಯಲು ಅರ್ಹರಿರುವುದಿಲ್ಲ. ಅರ್ಜಿದಾರರು ಕಡ್ಡಾಯವಾಗಿ ಐಫ್ಎಸ್ಸಿ ಕೋಡ್ ಇರುವ ಬ್ಯಾಂಕ್ ಖಾತೆ ಪಾಸ್ ಬುಕ್ ಪ್ರತಿಯನ್ನು ಸಲ್ಲಿಸಬೇಕು.
ಅರ್ಜಿಗಳನ್ನು ಆನ್ಲೈನ್ ವೆಬ್ಸೈಟ್ https://kmdconline.karnataka.gov.in/ ಗೆ ಭೇಟಿ ನೀಡಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನ ಅಕ್ಟೋಬರ್ 16.ಅರ್ಜಿ ಸಲ್ಲಿಸಿದ ಪ್ರತಿ ಹಾಗೂ ಅಗತ್ಯ ದಾಖಲಾತಿಗಳೊಂದಿಗೆ ನಿಗಮದ ಕಚೇರಿಯಲ್ಲಿ ಸಲ್ಲಿಸಬೇಕಾಗಿರುತ್ತದೆ. ತದನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಹತ್ತಿರದ ಮೌಲಾನ ಆಜಾದ್ ಭವನದ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ (ನಿ) ಜಿಲ್ಲಾ ವ್ಯವಸ್ಥಾಪಕರ ಕಚೇರಿ ಅಥವಾ ದೂ.08392-294370, 8277944207 ಗೆ ಸಂಪರ್ಕಿಸಬಹುದು ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.