ಬೆಳಗಾವಿ: ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಗುರುತಿಸಲಾಗುವ ಮಾಧ್ಯಮರಂಗವು ಆಡಳಿತ ವ್ಯವಸ್ಥೆ ಸುಧಾರಣೆಗೆ ಅನುಕೂಲ ಕಲ್ಪಿಸುವುದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಬೇಕು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
ನಗರದ ಎಸ್.ಜಿ.ಬಿ.ಐ.ಟಿ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಉದ್ಘಾಟಿಸಿ ಅವರು ಮಾತನಾಡಿದರು.
ಭಾಷಾ ಸೂಕ್ಷ್ಮತೆ ಇರುವುದರಿಂದ ಜಿಲ್ಲೆಯಲ್ಲಿ ನಡೆಯುವ ವರದಿಗಳು ದೆಹಲಿಯಲ್ಲಿ ಕೂಡ ಸದ್ದು ಮಾಡುತ್ತವೆ. ಆದ್ದರಿಂದ ಕೆಲವೊಮ್ಮೆ ವೈಯಕ್ತಿಕ ಘರ್ಷಣೆಗಳು ಕೂಡ ಜಾತಿ-ಧರ್ಮ, ಭಾಷಾ ವೈಷಮ್ಯದ ಸ್ವರೂಪ ಪಡೆದುಕೊಂಡು ಜಿಲ್ಲೆಗೆ ಕೆಟ್ಟ ಹೆಸರು ತರುತ್ತವೆ. ಇದರಿಂದ ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ. ಆದ್ದರಿಂದ ಜಾತಿ-ಧರ್ಮ, ಭಾಷೆಯ ವಿಚಾರಕ್ಕೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳನ್ನು ವರದಿ ಮಾಡುವಾಗ ಮಾಧ್ಯಮ ಪ್ರತಿನಿಧಿಗಳು ಸಮಗ್ರ ಸಂಗತಿಯನ್ನು ಪರಾಮರ್ಶೆ ಮಾಡಿಕೊಂಡು ನೈಜ ಸಂಗತಿಯನ್ನು ವರದಿ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಪತ್ರಕರ್ತರಿಗೆ ನಿವೇಶನ ಹಾಗೂ ಆರೋಗ್ಯ ವಿಮೆ ಸೇರಿದಂತೆ ಪತ್ರಕರ್ತರ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಪತ್ರಕರ್ತರಿಗೆ ನಿವೇಶನ ಮಂಜೂರಾತಿಗೆ ಜಿಲ್ಲಾಧಿಕಾರಿ, ನಗರಾಭಿವೃದ್ಧಿ ಆಯುಕ್ತರೊಂದಿಗೆ ಚರ್ಚಿಸಲಾಗುವುದು ಎಂದು ಸಚಿವ ಜಾರಕಿಹೊಳಿ ಭರವಸೆ ನೀಡಿದರು.
ಸುದ್ದಿಗಳ ಸತ್ಯಾಸತ್ಯತೆ ಪರಿಶೀಲಿಸಿ, ವರದಿಗಳನ್ನು ಮಾಡಬೇಕು. ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಸರ್ಕಾರವನ್ನು ಎಚ್ಚರಿಸುವಂತಹ ಕೆಲಸಗಳನ್ನು ಮಾಡಬೇಕು. ಸಮಾಜ ತಿದ್ದುವ ಮತ್ತು ಜನರ ಸಮಸ್ಯೆಗಳನ್ನು ಸರ್ಕಾರಕ್ಕೆ ತಲುಪಿಸುವ ದೂತರಾಗಿ ಮಾಧ್ಯಮ ಕಾರ್ಯನಿರ್ವಹಿಸುತ್ತಿದೆ ಎಂದರು.
ಬೆಳಗಾವಿ ಲೋಕಸಭಾ ಸಂಸದ ಜಗದೀಶ್ ಶೆಟ್ಟರ್ ಅವರು, ಪ್ರಜಾತಂತ್ರದ ವ್ಯವಸ್ಥೆಯಲ್ಲಿ ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗ, ಮಾಧ್ಯಮ ಮೂಲಕ ಪ್ರಜಾತಂತ್ರ ಯಶಸ್ವಿಯಾಗಿ ನಡೆಯುತ್ತದೆ. ಸಮಾಜದಲ್ಲಿ ಜಾಗೃತಿ, ಜನರಲ್ಲಿ ತಿಳುವಳಿಕೆ ಮೂಡಿಸುವ ಕಾರ್ಯ ಮಾಧ್ಯಮ ನಿರ್ವಹಿಸುತ್ತದೆ. ಸಮಾಜದ ಬದಲಾವಣೆಯಲ್ಲಿ ಎಲೆಕ್ಟ್ರಾನಿಕ್ ಮತ್ತು ಮುದ್ರಣ ಮಾಧ್ಯಮ ಬಹಳ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಆದ್ದರಿಂದ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಕಾರ್ಯನಿರ್ವಿಸಬೇಕು ಎಂದು ಕರೆ ನೀಡಿದರು.
ಪತ್ರಕರ್ತರಿಗೆ ನಿವೇಶನ ಮಂಜೂರಾತಿ ಸೇರಿದಂತೆ ಪತ್ರಕರ್ತರ ಭವನ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಶೆಟ್ಟರ್ ಭರವಸೆ ನೀಡಿದರು.
ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ ಮಾತನಾಡಿ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪತ್ರಿಕಾರಂಗ ನಾಲ್ಕನೆಯ ಸ್ಥಂಬವಾಗಿ ಕಾರ್ಯ ನಿರ್ವಹಿಸುತ್ತದೆ. ಸತ್ಯಪರ ಹಾಗೂ ನೈಜ ವರದಿಗಳನ್ನು ನಿರಂತರ ಪ್ರಸಾರ ಮಾಡುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು ಎಂದು ಹೇಳಿದರು.
ಸಂಘಟನೆಯಿಂದ ಹೊಣೆಗಾರಿಕೆ ಹೆಚ್ಚುತ್ತದೆ. ಸಂಘಟನೆಯ ಬೇಡಿಕೆಗಳಿಗೆ ಎಲ್ಲ ಜನಪ್ರತಿನಿಧಿಗಳು ಅಧಿಕಾರಿಗಳು ಸಹಕಾರ ನೀಡುತ್ತಾರೆ. ಪತ್ರಕರ್ತರು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಬೇಕು. ಪ್ರಜಾಪ್ರಭುತ್ವದ ರಕ್ಷಕರಾಗಿ ಪಾರದರ್ಶಕ ದೃಷ್ಟಿಕೋನದಿಂದ ವರದಿ ಪ್ರಸಾರ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, “ಸತ್ಯದ ಬೆಳಕು ಹರಡುವ ಶಕ್ತಿಯೇ ಮಾಧ್ಯಮ”ವಾಗಿದೆ. ಪಾರದರ್ಶಕ ವರದಿ ಮೂಲಕ ಪ್ರಜೆ ಹಾಗೂ ಸರ್ಕಾರದ ಮಧ್ಯ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಪ್ರತಿ ಪ್ರಜೆಗಳಿಗೆ ಶಕ್ತಿ ತುಂಬುವ ಜತೆಗೆ ಸತ್ಯದ ಕಾವಲುಗಾರನಾಗಿ ಮಾಧ್ಯಮ ಕೆಲಸ ಮಾಡಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಭೀಮಾಶಂಕರ ಗುಳೇದ ಮಾತನಾಡಿ “ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು” ಎಂಬ ಮಾತಿನಂತೆ ಪ್ರತಿಯೊಂದು ವರದಿ ಮಾಡುವಾಗ ಪಾರದರ್ಶಕತೆ ಮತ್ತು ನೈಜತೆ ಇರಬೇಕು. ವರದಿಗಳನ್ನು ಪರಿಶೀಲಿಸಿ, ಪರಾಮರ್ಶೆ ಮಾಡಿಕೊಂಡು ಸಮಾಜದ ಸ್ವಾಸ್ಥ್ಯ ಕಾಪಾಡಲು ಪೂರಕವಾಗಿ ವರದಿಗಳನ್ನು ಪ್ರಸಾರ ಮಾಡಬೇಕು ಎಂದು ಸಲಹೆ ನೀಡಿದರು.