ಬೆಂಗಳೂರು: ದೇವನಹಳ್ಳಿ ಪಟ್ಟಣದ ಕೋಟೆ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಟ್ಟಡದ ಕಿಟಕಿಯ ಸಜ್ಜಾ ಕುಸಿದು ಮೂವರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ನಡೆದಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಅವರು ಮಂಗಳವಾರ ಬೆಂಗಳೂರಿನ ಹೊಸ್ಮಟ್ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಚರ್ಚಿಸಿ ಸಂಪೂರ್ಣ ಮಾಹಿತಿ ಪಡೆದು, ವಿದ್ಯಾರ್ಥಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಕೋರಿದರು.
ನಂತರ ಗಾಯಾಳು ವಿದ್ಯಾರ್ಥಿಯನ್ನು ಹಾಗೂ ಅವರ ಕುಟುಂಬಗಳನ್ನು ಧೈರ್ಯ ಹೇಳಿದರು.
ಗಾಯಾಳು ಮಕ್ಕಳ ಎಲ್ಲಾ ವೈದ್ಯಕೀಯ ವೆಚ್ಚವನ್ನು ಶಿಕ್ಷಣ ಇಲಾಖೆ ಭರಿಸಲಿದೆ. ವಿದ್ಯಾರ್ಥಿಗಳ ಚಿಕಿತ್ಸೆ, ಆರೋಗ್ಯದ ಬಗ್ಗೆ ಅಧಿಕಾರಿಗಳು ಕಾಲ ನಿಗಾವಹಿಸಬೇಕು ಎಂದು ಸೂಚಿಸಿದರು.
ಗಾಯಗೊಂಡ ಮೂರು ವಿದ್ಯಾರ್ಥಿಗಳಲ್ಲಿ ಓರ್ವ ಹೊಸ್ಮಟ್ ಆಸ್ಪತ್ರೆಗೆ ದಾಖಲಾಗಿದ್ದು, ಇನ್ನೊಬ್ಬನನ್ನು ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಈ ಮುನ್ನ ಬೌರಿಂಗ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಓರ್ವ ವಿದ್ಯಾರ್ಥಿಯನ್ನು ಈಗಾಗಲೇ ಡಿಸ್ಚಾರ್ಜ್ ಮಾಡಲಾಗಿದೆ.
ಸಚಿವರು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಶಾಲಾ ಕಟ್ಟಡವನ್ನು ಸಂಪೂರ್ಣ ಪರಿಶೀಲಿಸಿ ವರದಿ ಸಲ್ಲಿಸಲು ಆದೇಶಿಸಿದರು. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳ ಆರೋಗ್ಯ ಮತ್ತು ಭದ್ರತೆ ಸರ್ಕಾರದ ಪ್ರಮುಖ ಜವಾಬ್ದಾರಿ. ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.