ಬೆಂಗಳೂರು: ಬೆಂಗಳೂರು ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಬಹುನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗದ ಮೆಟ್ರೋಗೆ ಚಾಲನೆ ನೀಡಿದ್ದಾರೆ.
ಬೆಂಗಳೂರಿನ ರಾಗಿಗುಡ್ಡ ಮೆಟ್ರೋ ನಿಲ್ದಾಣದಲ್ಲಿ ಹಳದಿ ಮಾರ್ಗದ ಮೆಟ್ರೋವನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. 19 ಕಿ.ಮೀವರೆಗಿನ ಯೆಲ್ಲೋ ಲೈನ್ ಮಾರ್ಗದಲ್ಲಿ ನಾಳೆಯಿಂದಲೇ ಸಂಚಾರಕ್ಕೆ ಜನರಿಗೆ ಲಭ್ಯವಿರಲಿದೆ.
ಹಳದಿ ಮಾರ್ಗದ ಮೆಟ್ರೋಗೆ ಚಾಲನೆ ನೀಡಿದ ಪ್ರಧಾನಿ ಮೋದಿ, ರಾಗಿಗುಡ್ಡ ಮೆಟ್ರೋ ನಿಲ್ದಾಣದಿಂದ ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಸ್ಟೆಷನ್ ಗೆ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿದರು. ಪ್ರಧಾನಿ ಮೋದಿಯವರು ಪ್ರಯಾಣಿಸಿದ ಮೆಟ್ರೋಗೆ ಮಹಿಳೆ ಲೋಕೋ ಪೈಲಟ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ಲೋಕೋ ಪೈಲಟ್ ವಿನುತಾ ಅವರ ಸಾರಥ್ಯದಲ್ಲಿ ಈ ಮೆಟ್ರೋ ಸಾಗಿದ್ದು, ಪ್ರಧಾನಿ ಮೋದಿ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ವಿದ್ಯಾರ್ಥಿಗಳು, ಮೆಟ್ರೋ ಕಾರ್ಮಿಕರು ಸೇರಿ ಒಟ್ಟು 117 ಜನರು ಪ್ರಯಾಣಿಸಿದ್ದಾರೆ.
ಎಂಟು ಜನ ಮಕ್ಕಳು, ಎಂಟು ಮೆಟ್ರೋ ಉದ್ಯೋಗಿಗಳು, 16 ವಿದ್ಯಾರ್ಥಿಗಳು, ಆರ್ ವಿ ರೋಡ್ ನಿಂದ ಬೊಮ್ಮಸಂದ್ರ ಯೆಲ್ಲೋ ಲೈನ್ ಮಾರ್ಗದಲ್ಲಿ ಕೆಲಸ ಮಾಡಿದ 8 ಜನ ಕಾರ್ಮಿಕರು ಹಾಗೂ 8 ಜನ ಜನಸಾಮಾನ್ಯರು ಪ್ರಧಾನಿ ಮೋದಿ ಜೊತೆ ಫಸ್ಟ್ ಕೋಚ್ ನಲ್ಲಿ ಪ್ರಯಾಣ ಬೆಳೆಸಿದ್ದಾರೆ.
ಆರು ಮೆಟ್ರೋ ಸ್ಟೆಷನ್ ಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಪ್ರತಿ ಕಾರ್ಯಕ್ರಮಕ್ಕೆ ಐದು ನಿಮಿಷಗಳ ಕಾಲಾವಕಾಶ ನೀಡಲಾಗಿದೆ.