ಮಾಡಲೂ ತಿನ್ನಲೂ ಸುಲಭವಾದ ತಿಂಡಿ ಅಂದರೆ ಅದು ದೋಸೆ. ಮಕ್ಕಳಿಗೂ ದೋಸೆ ಅಂದರೆ ಸಕ್ಕತ್ ಇಷ್ಟ ಆಗತ್ತೆ. ಆದರೆ ಒಂದೇ ಬಗೆಯ ದೋಸೆ ತಿನ್ನಲು ಯಾರಿಗಾದರೂ ಬೇಸರವೇ. ವಾರಪೂರ್ತಿ ದಿನಕ್ಕೊಂದು ಬಗೆಯ ದೋಸೆ ಮಾಡಬಹುದಾದ ಮೆನು ಇಲ್ಲಿದೆ. ಇದು ಸುಲಭ ಅಷ್ಟೇ ಅಲ್ಲ, ಆರೋಗ್ಯಕರ ಕೂಡ.
ಉದ್ದಿನ ದೋಸೆ
ಎಲ್ಲರಿಗೂ ಗೊತ್ತಿರುವ ದೋಸೆ ಇದು. ಅಕ್ಕಿ, ಉದ್ದಿನ ಬೇಳೆ, ಸ್ವಲ್ಪ ಮೆಂತ್ಯೆ ಹಾಕಿ 4-5 ಗಂಟೆಗಳ ಕಾಲ ನೆನೆಸಿ ರುಬ್ಬಿದರೆ ಬೆಳಗ್ಗೆ ಗರಿಗರಿ ದೋಸೆ ಮಾಡಬಹುದು. ದೋಸೆ ಸ್ವಲ್ಪ ಮೃದುವಾಗಿ ಆಗಬೇಕು ಅನ್ನುವವರು ಒಂದು ಹಿಡಿ ಅವಲಕ್ಕಿ ನೆನೆಸಿ ಜೊತೆಯಲ್ಲಿ ರುಬ್ಬಿಕೊಳ್ಳಬೇಕು.
ಮೆಂತ್ಯೆ ದೋಸೆ
ಕೇವಲ ಅಕ್ಕಿ ಹಾಗೂ ಮೆಂತ್ಯೆ ಎರಡೇ ಪದಾರ್ಥದಿಂದ ತಯಾರಾಗುವ ದೋಸೆ ಇದು. 2:1 ಪ್ರಮಾಣದಲ್ಲಿ ಅಕ್ಕಿ ಉದ್ದಿನ ಬೇಳೆ ಇರಲಿ. ರಾತ್ರಿ ನೆನೆಸಿ ಬೆಳಗ್ಗೆ ರುಬ್ಬಿ ತಕ್ಷಣ ದೋಸೆ ಮಾಡಬಹುದು.
ಕಾಯಿ ದೋಸೆ
ಮೆಂತ್ಯೆ ದೋಸೆಯ ಹಾಗೆಯೇ ಕಾಯಿ ದೋಸೆಗೆ ಎರಡೇ ಪದಾರ್ಥ ಸಾಕು. ಒಂದು ಲೋಟ ಅಕ್ಕಿಗೆ ಒಂದು ಹಿಡಿ ಕಾಯಿ ಹಾಕಬೇಕು. ಅಕ್ಕಿಯನ್ನು ಅರ್ಧ ಗಂಟೆ ನೆನೆಸಿದರೆ ಸಾಕು. ತೆಳುವಾದ, ಸ್ವಾದಿಷ್ಟವಾದ ಕಾಯಿ ದೋಸೆ ನೆನಪಿಸಿಕೊಂಡ ಕೂಡಲೇ ಮಾಡಬಹುದು.
ಹೆಸರುಕಾಳು ದೋಸೆ
ಹಿಂದಿನ ರಾತ್ರಿ ಎರಡು ಲೋಟ ಹೆಸರು ಕಾಳಿಗೆ ಅರ್ಧ ಲೋಟ ಅಕ್ಕಿ ನೆನೆಸಿ ಮಾರನೇ ದಿನ ಬೆಳಗ್ಗೆ ಇದರ ಜೊತೆಗೆ ಸ್ವಲ್ಪ ಜೀರಿಗೆ ಹಾಗೂ ಶುಂಠಿ ಬಳಸಿ ರುಬ್ಬಿ ದೋಸೆ ಮಾಡಬಹುದು.
ಅಡೈ ದೋಸೆ
ಕಡಲೇಬೇಳೆ, ಹೆಸರುಬೇಳೆ, ತೊಗರಿಬೇಳೆ, ಮಸೂರ್ ಬೇಳೆ ಹೀಗೆ ಎಲ್ಲಾ ಬಗೆಯ ಬೇಳೆಗಳನ್ನೂ ಸಮಪ್ರಮಾಣದಲ್ಲಿ ನೆನೆಸಿ ರುಬ್ಬಿ ದೋಸೆ ಮಾಡಬಹುದು. ಅಡೈ ದೋಸೆ ಪ್ರೊಟೀನ್ ಭರಿತ ದೋಸೆಯೂ ಹೌದು.
ರವೆ ದೋಸೆ
ಸ್ವಲ್ಪ ಹುಳಿ ಮಜ್ಜಿಗೆ ಅಥವಾ ಮೊಸರು, ಒಂದು ಕಪ್ ರವೆ, ಎರಡು ಚಮಚ ಅಕ್ಕಿ ಹಿಟ್ಟು ಹಾಗೂ ಕಡಲೇಹಿಟ್ಟು ಇಷ್ಟನ್ನು ಮಿಶ್ರ ಮಾಡಿ ಜೊತೆಗೆ ಜೀರಿಗೆ, ಈರುಳ್ಳಿ, ಕೊತ್ತಂಬರಿ ಸೊಪ್ಪು ಹಾಕಿ ತಕ್ಷಣವೇ ರವೆ ದೋಸೆ ಮಾಡಬಹುದು.
ಹೆಸರುಬೇಳೆ ದೋಸೆ
ಹಿಂದಿನ ರಾತ್ರಿ ಹೆಸರು ಬೇಳೆ ನೆನೆಸಿ, ಮಾರನೇ ದಿನ ಹಸಿ ಮೆಣಸಿನಕಾಯಿ, ಜೀರಿಗೆ ಹಾಕಿ ರುಬ್ಬಿ ಸುಲಭದಲ್ಲಿ ಹೆಸರು ಬೇಳೆ ದೋಸೆ ಮಾಡಬಹುದು.