ತನ್ನ ಯಶಸ್ಸಿನ ಕಥೆಯನ್ನು ಬಿಚ್ಚಿಟ್ಟ ಬಿಹಾರದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ

ದೇಶದಲ್ಲಿ ಅಧಿಕಾರಶಾಹಿ ವರ್ಗ ಅನುಭವಿಸುತ್ತಿರುವ ಐಷಾರಾಮಿ ಜೀವನ ಹಾಗೂ ಪಡೆಯುತ್ತಿರುವ ಸವಲತ್ತುಗಳಿಗೆ ಆಕರ್ಷಿತರಾಗಿ ಪ್ರತಿ ವರ್ಷ ಕೇಂದ್ರ ಲೋಕ ಸೇವಾ ಆಯೋಗದ (ಯುಪಿಎಸ್‌ಸಿ) ನಾಗರಿಕ ಸೇವಾ ಪರೀಕ್ಷೆಗಳನ್ನು ಪಡೆಯುವವರ ಸಂಖ್ಯೆ ದಶಲಕ್ಷಕ್ಕೂ ಹೆಚ್ಚಿರುತ್ತದೆ. ಸಾವಿರಕ್ಕಿಂತ ಕಡಿಮೆ ಇರುವ ಹುದ್ದೆಗಳಿಗೆ ಹೀಗೆ ಲಕ್ಷಾಂತರ ಜನ ಪರೀಕ್ಷೆ ಬರೆಯುತ್ತಲೇ ಇರುತ್ತಾರೆ.

ಅದರಲ್ಲೂ ವಿಪರೀತ ಜನಸಂಖ್ಯೆಯ ಸಮಸ್ಯೆಯೊಂದಿಗೆ ನಿರುದ್ಯೋಗದ ಸಮಸ್ಯೆ ಅತೀವವಾಗಿರುವ ಬಿಹಾರ ಹಾಗೂ ಉತ್ತರ ಪ್ರದೇಶಗಳಲ್ಲಂತೂ ಸರ್ಕಾರೀ ನೌಕರಿಯ ಗೀಳು ವಿಪರೀತ ಎನ್ನುವಂತೆ ಇದೆ.

ಇವೆಲ್ಲದರ ನಡುವೆಯೇ, ಕೆಲವೊಂದು ಅಭ್ಯರ್ಥಿಗಳು ತಮ್ಮ ಪರಿಶ್ರಮ ಹಾಗೂ ಬುದ್ಧಿವಂತಿಕೆಯಿಂದ ಈ ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿ ಕಿರಿಯರಿಗೆ ಸ್ಪೂರ್ತಿಯಾಗುತ್ತಾರೆ. ಅಂಥವರಲ್ಲಿ ಒಬ್ಬರು ಬಿಹಾರದ ಮಂಜರಿ ಜರೂಹರ್‌.

ಬಿಹಾರ ಮೊದಲ ಮಹಿಳಾ ಐಪಿಎಸ್ ಅಧಿಕಾರಿಯಾಗಿ ನಿವೃತ್ತರಾಗಿರುವ ಮಂಜರಿ ಕಷ್ಟಾತಿಕಷ್ಟದ ದಿನಗಳನ್ನು ಮೆಟ್ಟಿ ನಿಂತು ಐಪಿಎಸ್‌ ಆದ ತಮ್ಮ ಪಯಣದ ಕುರಿತು ಹೇಳಿಕೊಂಡಿದ್ದಾರೆ. ತಮ್ಮ ಇಡೀ ಜೀವನದುದ್ದಕ್ಕೂ ಮಹಿಳೆಯರು ಎದುರಿಸುವ ಸಂಕಷ್ಟಗಳನ್ನು ನೋಡಿಕೊಂಡೇ ಬಂದಿದ್ದಾಗಿ ತಿಳಿಸುವ ಇವರು ಪಟನಾ ಮಹಿಳೆಯರ ಕಾಲೇಜಿನಲ್ಲಿ ಬಿ.ಎ (ಆನರ್ಸ್) ಪದವಿ ಪೂರೈಸಿದ್ದಾರೆ.

ಪುರುಷ ಪ್ರಧಾನ ಸಮಾಜದ ಅತಿರೇಕಗಳ ಸಂತ್ರಸ್ತೆಯಾಗಿರುವ ಮಂಜರಿಗೆ ಸಣ್ಣ ವಯಸ್ಸಿನಿಂದಲೇ ಮದುವೆಯಾಗಿ ಮನೆಗೆಲಸ ಮಾಡುವುದನ್ನೇ ತಲೆಯಲ್ಲಿ ತುಂಬಲಾಗಿತ್ತಂತೆ. ತನ್ನ 19ನೇ ವಯಸ್ಸಿನಲ್ಲೇ ಮದುವೆಯಾದ ಮಂಜರಿ, ತಮ್ಮ ಕುಟುಂಬದಲ್ಲಿ ಬಹಳ ಮಂದಿ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ನೋಡಿಕೊಂಡೇ ಬೆಳೆದವರು.

ತಂತಮ್ಮ ಹುದ್ದೆಗಳಿಂದ ಎಲ್ಲಿಲ್ಲದ ಗೌರವಗಳಿಗೆ ಪಾತ್ರರಾಗಿದ್ದ ಕುಟುಂಬಸ್ಥರನ್ನು ಕಂಡ ಮಂಜರಿ ಐಪಿಎಸ್ ಅಧಿಕಾರಿಯಾಗುವ ತಮ್ಮ ಕನಸನ್ನು ಬೆನ್ನೇರಿ ದೆಹಲಿಗೆ ಹೊರಟು ಕೋಚಿಂಗ್ ತರಗತಿಗಳನ್ನೂ ತೆಗೆದುಕೊಂಡರು.

1976ರಲ್ಲಿ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ತೇರ್ಗಡೆಯಾದ ಮಂಜರಿ ದೇಶದ ಮೊದಲ ಐವರು ಮಹಿಳಾ ಐಪಿಎಸ್ ಅಧಿಕಾರಿಗಳಲ್ಲಿ ಒಬ್ಬರಾಗಿದ್ದು, ಬಿಹಾರದ ಮೊದಲ ಮಹಿಳಾ ಐಪಿಎಸ್ ಅಧಿಕಾರಿಯಾಗಿದ್ದಾರೆ.

ತಮ್ಮ ಜೀವನದ ಯಶೋಗಾಥೆಗಳ ಕುರಿತು ಬರೆಯಲು ಆರಂಭಿಸಿದ ಮಂಜರಿ, ;ಮೇಡಂ ಸರ್‌’ ಹೆಸರಿನ ಪುಸ್ತಕವೊಂದನ್ನು ಪ್ರಕಟಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read