ಐಟಿ ಉದ್ಯೋಗ ತ್ಯಜಿಸಿ ಐಪಿಎಸ್‌ ಅಧಿಕಾರಿಯಾದ ಶಹನಾಜ಼್

ರಾಷ್ಟ್ರವನ್ನು ಕಾಲಕಾಲಿಕವಾಗಿ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಿಕೊಂಡು ಹೋಗಲು ಅಗತ್ಯವಾದ ನೀತಿ ರಚನೆ ಹಾಗೂ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಅಗತ್ಯವಿರುವ ಅಗ್ರ ಚಿಂತಕರನ್ನು ಕೊಡಮಾಡಬೇಕಿರುವ ಕೇಂದ್ರ ಲೋಕ ಸೇವಾ ಆಯೋಗದ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಪಾಸಾಗಲು ದೇಶದ ಯುವ ಜನತೆ ಎಲ್ಲಿಲ್ಲದ ಕಸರತ್ತು ನಡೆಸುತ್ತಾರೆ.

ಐಎಎಸ್/ಐಪಿಎಸ್‌ ಹುದ್ದೆಗಳ ಮೂಲಕ  ಜನ ಸಾಮಾನ್ಯರ ಸೇವೆಗೆ ಅವಕಾಶ  ಸಿಗುತ್ತದೆ ಎಂಬ ಕಾರಣಕ್ಕೆ ಕೂಲಿ ಕಾರ್ಮಿಕರಿಂದ ಹಿಡಿದು ಐಟಿ ವಲಯದಲ್ಲಿರುವ ಮಂದಿಗೂ ಸಹ ಒಮ್ಮೆಯಾದರೂ ಪ್ರಯತ್ನಿಸಿ ನೋಡುವ ಬಯಕೆ. ಹೀಗಾಗಿ, ಕೆಲವೇ ನೂರು ಹುದ್ದೆಗಳ ಭರ್ತಿಗೆ 11-12 ಲಕ್ಷ ಮಂದಿ ಪರೀಕ್ಷೆ ತೆಗೆದುಕೊಳ್ಳುವ ಮಟ್ಟದಲ್ಲಿ ಈ ಪರೀಕ್ಷೆಗಳಿಗೆ ಕ್ರೇಜ಼್.

ಐಪಿಎಸ್ ಅಧಿಕಾರಿ ಶಹನಾಜ಼್ ಇಲಿಯಾಸ್‌ ಸಹ ಐಟಿ ಕ್ಷೇತ್ರದಲ್ಲಿ ಐದು ವರ್ಷಗಳ ಕಾಲ ದುಡಿದವರು. ತಮ್ಮ ಎಂದಿನ ಕೆಲಸವನ್ನು ಅಷ್ಟಾಗಿ ಇಷ್ಟ ಪಡದ ಶಹನಾಜ಼್‌, ಸಮಾಜದಲ್ಲಿ ಇನ್ನಷ್ಟು ಪ್ರತಿಷ್ಠಿತ ಸ್ಥಾನಮಾನ ಅರಸಿ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಂಡು ಅದರಲ್ಲಿ ಸಫಲರಾಗಿದ್ದಾರೆ.

ಹೆರಿಗೆ ರಜೆ ಮೇಲಿದ್ದ ಶಹನಾಜ಼್‌, ತಮ್ಮ ಈ ರಜಾ ಅವಧಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಉದ್ದೇಶದಿಂದ ಸರ್ಕಾರೀ ಕೆಲಸ ಸೇರುವತ್ತ ಪ್ರಯತ್ನ ಆರಂಭಿಸಿದರು. ಇದೇ ಹುಮ್ಮಸ್ಸಿನಲ್ಲಿ ಲೋಕಸೇವಾ ಆಯೋಗದ ಪರೀಕ್ಷೆಗಳಿಗೆ ತಯಾರಿ ಆರಂಭಿಸಿದರು ಶಹನಾಜ಼್.

ತಯಾರಿ ನಡೆಸಲು ಕೇವಲ ಎರಡು ತಿಂಗಳು ವ್ಯಯಿಸಿದ ಶಹನಾಜ಼್‌, ಒಂಬತ್ತು ತಿಂಗಳ ತುಂಬು ಗರ್ಭಿಣಿಯಾದ ವೇಳೆಯಲ್ಲೇ ಪರೀಕ್ಷೆ ತೆಗೆದುಕೊಂಡಿದ್ದಾರೆ.

2020ರ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾದ ಶಹನಾಜ಼್‌, ತಮ್ಮ ಕುಟುಂಬಸ್ಥರ ನೆರವಿನಿಂದ ಪುಟ್ಟ ಮಗುವಿನ ಆರೈಕೆಯ ಹೊರೆ ಅಷ್ಟಾಗಿ ಬೀಳದೇ ಇದ್ದ ಕಾರಣ, ಓದಿನತ್ತ ಇನ್ನಷ್ಟು ಗಮನ ಹರಿಸಿ ಅಖಿಲ ಭಾರತ ಮಟ್ಟದಲ್ಲಿ 217ನೇ ರ‍್ಯಾಂಕ್ ಪಡೆಯಲು ಸಫಲರಾದರು.

ಸ್ವಯಂ ನಿಯಂತ್ರಣ ಹಾಗೂ ಬದ್ಧತೆಗಳ ಮೂಲಕ ಯುಪಿಎಸ್‌ಸಿ ಮಾತ್ರವಲ್ಲ ಯಾವುದೇ ಪರೀಕ್ಷೆಯಲ್ಲೂ ಸಫಲತೆ ಸಾಧಿಸಬಹುದು ಎಂಬುದು ಶಹನಾಜ಼್‌ರ ಬಲವಾದ ನಂಬಿಕೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read