ಭಾರತೀಯ ಉದ್ಯಮ ಜಗತ್ತಿನಲ್ಲಿ ಹೊಸ ದಾಖಲೆಯೊಂದು ಸೃಷ್ಟಿಯಾಗಿದೆ. ಪೂನಾವಾಲಾ ಫಿನ್‌ಕಾರ್ಪ್‌ನ ಕಾರ್ಯನಿರ್ವಾಹಕೇತರ ನಿರ್ದೇಶಕರಾದ ಅಭಯ್ ಭುತಾಡ ಅವರು ಭಾರತದ ಅತೀ ಹೆಚ್ಚು ಸಂಭಾವನೆ ಪಡೆಯುವ ಸಿಇಒ ಆಗಿ ಹೊರಹೊಮ್ಮಿದ್ದಾರೆ. ಇವರು ವಾರ್ಷಿಕ 242 ಕೋಟಿ ರೂ. ವೇತನ ಪಡೆಯುತ್ತಿದ್ದಾರೆ. ಇದು ಭಾರತದ ಪ್ರಮುಖ ಉದ್ಯಮಿಗಳಾದ ಮುಖೇಶ್ ಅಂಬಾನಿ, ಗೌತಮ್ ಅದಾನಿ, ನಾರಾಯಣ ಮೂರ್ತಿ ಅವರ ಸಂಭಾವನೆಗಿಂತಲೂ ಅಧಿಕವಾಗಿದೆ.
ಪೂನಾವಾಲಾ ಫಿನ್‌ಕಾರ್ಪ್‌ನ ಆದಾಯದ ಶೇ.7.66 ಮತ್ತು ನಿವ್ವಳ ಲಾಭದ ಶೇ.14.33 ರಷ್ಟು ಅಭಯ್ ಭುತಾಡ ಅವರ ವೇತನವಾಗಿದೆ. ಹಣಕಾಸು ವಲಯದಲ್ಲಿ ಪೂನಾವಾಲಾ ಫಿನ್‌ಕಾರ್ಪ್ ಅನ್ನು ಪ್ರಮುಖ ಕಂಪನಿಯಾಗಿ ಬೆಳೆಸುವಲ್ಲಿ ಅಭಯ್ ಭುತಾಡ ಅವರ ಪಾತ್ರ ಮಹತ್ವದ್ದಾಗಿದೆ.
ಇವರಲ್ಲದೇ, ಹೀರೋ ಮೋಟೋಕಾರ್ಪ್‌ನ ಪವನ್ ಮುಂಜಾಲ್ ಕೂಡಾ ಭಾರತದ ಅತೀ ಹೆಚ್ಚು ಸಂಭಾವನೆ ಪಡೆಯುವ ಸಿಇಒಗಳ ಪಟ್ಟಿಯಲ್ಲಿದ್ದಾರೆ. ಹೀರೋ ಮೋಟೋಕಾರ್ಪ್‌ನ ಆದಾಯದ ಶೇ.0.28 ರಷ್ಟು ಇವರ ವೇತನವಾಗಿದ್ದರೂ, ದ್ವಿಚಕ್ರ ವಾಹನ ಉದ್ಯಮದಲ್ಲಿ ಹೀರೋ ಮೋಟೋಕಾರ್ಪ್ ಅನ್ನು ಜಾಗತಿಕ ಮಟ್ಟದಲ್ಲಿ ಮುನ್ನಡೆಸುವಲ್ಲಿ ಪವನ್ ಮುಂಜಾಲ್ ಅವರ ದೂರದೃಷ್ಟಿ ಮತ್ತು ಕಾರ್ಯತಂತ್ರಗಳು ಪ್ರಮುಖ ಪಾತ್ರವಹಿಸಿವೆ.