ಬೆಂಗಳೂರು: ಸರ್ಕಾರಿ ವೈದ್ಯಕೀಯ ಸೀಟಿಗಾಗಿ ನಕಲಿ ದಾಖಲೆ ಸೃಷ್ಟಿಸಿ ಅಂಗವಿಕಲ ಕೋಟಾದಡಿ ಸೀಟು ಪಡೆಯಲು ಯತ್ನಿಸಿದ್ದ ಜಾಲವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಭೇದಿಸಿದೆ.
21 ಅಭ್ಯರ್ಥಿಗಳು ಹಾಗೂ ನಕಲಿ ದಾಖಲೆಗಳನ್ನು ಸೃಷ್ಟಿಸಲು ಸಹಕರಿಸಿದ ನಾಲ್ವರ ವಿರುದ್ಧ ಕೆ ಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ನಿರ್ದೇಶನದಂತೆ ಮುಖ್ಯ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ್, ಬೆಂಗಳೂರಿನ ಮಲ್ಲೇಶ್ವರಂ ಠಾಣೆಯಲ್ಲಿ ದೂರು ನೀಡಿದ್ದಾರೆ.
21 ಅಭ್ಯರ್ಥಿಗಳು ಶ್ರವಣ ದೋಷವಿದೆ ಎಂದು ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಿದ್ದರು. ಈ ಪೈಕಿ ಹೆಚ್ಚಿನವರು ಅಂಗವಿಕಲರ ವಿಶಿಷ್ಟ ಗುರುತಿನ ಚೀಟಿಯನ್ನು ವಿಜಯನಗರ ಜಿಲ್ಲೆಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಿಂದ ಪಡೆದಿದ್ದಾರೆ. ಯುಡಿ ಐಡಿ ಪಡೆಯಲು ಇತ್ತೀಚೆಗೆ ಪಡೆದ ವೈದ್ಯಕೀಯ ಪ್ರಮಾಣಪತ್ರವನ್ನು ಹಾಜರುಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕೆಇಎ ಈ ಅಭ್ಯರ್ಥಿಗಳ ವೈದ್ಯಕೀಯ ತಪಾಸಣೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿತ್ತು. ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಈ ಅಭ್ಯರ್ಥಿಗಳು ನಕಲಿ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಿದ್ದು, ಈ ಬಗ್ಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಕೋರಿದ್ದರು. ಈ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ.