ಕೊಪ್ಪಳ: ಕೊಪ್ಪಳದ ಕೆ.ಆರ್.ಐ.ಡಿ.ಎಲ್.ನಲ್ಲಿ ಅಕ್ರಮ ನಡೆದ ಆರೋಪ ಕೇಳಿ ಬಂದಿದ್ದು, ಭಾಗಿಯಾದ ಇಬ್ಬರು ಅಧಿಕಾರಿಗಳ ವಿರುದ್ಧ ಕೊಪ್ಪಳ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಲಾಗಿದೆ.
96 ಕಾಮಗಾರಿಗಳಲ್ಲಿ 72 ಕೋಟಿ ಸರ್ಕಾರಿ ಹಣ ದುರ್ಬಳಕೆ ಮಾಡಲಾಗಿದೆ ಎಂದು ಅಧಿಕಾರಿಗಳು ದಾಖಲೆ ಸಲ್ಲಿಸಿದ್ದಾರೆ. 2019 ರಿಂದ 2025 ರವರೆಗೆ ಕೊಪ್ಪಳ ಜಿಲ್ಲೆಯ ವಿವಿಧಡೆ ನಡೆಸಿದ 96 ಕಾಮಗಾರಿಗಳಲ್ಲಿ ಅಂದಿನ ಇಇಯಾಗಿದ್ದ ಜಡ್.ಎಂ. ಚಿಂಚೋಳಿಕರ್ ಹಾಗೂ ಹೊರಗುತ್ತಿಗೆ ನೌಕರ ಕಳಕಪ್ಪ ನಿಡಗುಂದಿ ಎಂಬುವವರು 72 ಕೋಟಿ ರೂ. ಹಣ ದುರ್ಬಳಕೆ ಮಾಡಿಕೊಂಡ ಆರೋಪ ಕೇಳಿ ಬಂದಿದೆ.
ಈ ಹಿನ್ನೆಲೆಯಲ್ಲಿ ಕೆ.ಆರ್.ಐ.ಡಿ.ಎಲ್ ಎಂಡಿ ಬಸವರಾಜ್ ನಿರ್ದೇಶನದ ಮೇರೆಗೆ ಕೊಪ್ಪಳ ವಿಭಾಗದ ಅನಿಲ್ ಪಾಟೀಲ್ ನೀಲೋಗಿಪುರ, ಉಪ ವಿಭಾಗದ ಆನಂದ ಕಾರ್ಲಕುಂಚಿ ಅವರು ಕೊಪ್ಪಳದ ಲೋಕಾಯುಕ್ತ ಕಚೇರಿಗೆ ತೆರಳಿ ಇಬ್ಬರು ಅಧಿಕಾರಿಗಳ ವಿರುದ್ಧ ಕೇಸು ದಾಖಲಿಸಿದ್ದಾರೆ.
2019 ರಿಂದ 25ರ ವರೆಗಿನ ವಿವಿಧ ಕಾಮಗಾರಿ ನಡೆಸಲಾಗಿದೆ. ಚರಂಡಿ, ರಸ್ತೆ, ಕುಡಿಯುವ ನೀರು ಸೇರಿ 96 ಕಾಮಗಾರಿ ಮಾಡಿರುವುದಾಗಿ ನಕಲಿ ಬಿಲ್ ಪಾವತಿಸಿ 72 ಕೋಟಿ ರೂ. ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಲಾಗಿದೆ.