ಚೆನ್ನೈ: ಡೀಸೆಲ್ ಸಾಗಿಸುತ್ತಿದ್ದ ಗೂಡ್ಸ್ ರೈಲಿಗೆ ಭಾರೀ ಬೆಂಕಿ ತಗುಲಿದೆ. ತಮಿಳುನಾಡಿನ ತಿರುವಳ್ಳೂರು ಸಮೀಪ ಅಗ್ನಿ ಅವಘಡ ಸಂಭವಿಸಿದೆ.
ಗೂಡ್ಸ್ ರೈಲು ಹಳಿತಪ್ಪಿ ಪಲ್ಟಿಯಾಗಿದ್ದು, ಬೆಂಕಿಯ ಜ್ವಾಲೆ ಇಡೀ ಪ್ರದೇಶಕ್ಕೆ ವ್ಯಾಪಿಸಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಹರಸಾಹಸ ನಡೆಸಿದ್ದಾರೆ. ಇಡೀ ಪ್ರದೇಶದಲ್ಲಿ ಬೆಂಕಿಯ ಜ್ವಾಲೆ, ದಟ್ಟ ಹೊಗೆ ಆವರಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರೆದಿದೆ. ಘಟನೆಯಿಂದಾಗಿ ಈ ಮಾರ್ಗದಲ್ಲಿ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ.
ಇಂದು ಬೆಳಿಗ್ಗೆ 5:30 ರ ಸುಮಾರಿಗೆ ತಿರುವಲ್ಲೂರು ರೈಲು ನಿಲ್ದಾಣದ ಬಳಿ ಡೀಸೆಲ್ ಸಾಗಿಸುತ್ತಿದ್ದ ಸರಕು ರೈಲಿನ ನಾಲ್ಕು ವ್ಯಾಗನ್‌ಗಳಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೀತಿ ಉಂಟಾಗಿದೆ. ಎತ್ತರದ ಅಗ್ನಿ ಜ್ವಾಲೆಗಳು, ಹಾನಿಯಾದ ವ್ಯಾಗನ್ ಗಳು ಹೊತ್ತಿ ಉರಿಯುತ್ತಿದ್ದು, ದಟ್ಟವಾದ ಕಪ್ಪು ಹೊಗೆ ಆವರಿಸಿದೆ. ಯಾವುದೇ ಜೀವಹಾನಿ ಅಥವಾ ಸುತ್ತಮುತ್ತಲಿನ ಆಸ್ತಿಗೆ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಎ ಶ್ರೀನಿವಾಸ ಪೆರುಮಾಳ್, ಅಗ್ನಿಶಾಮಕ ಸೇವೆಗಳ ಮುಖ್ಯಸ್ಥೆ ಸೀಮಾ ಅಗರ್ವಾಲ್ ಪರಿಶೀಲನೆ ನಡೆಸಿದ್ದಾರೆ.
ಮನಾಲಿಯಿಂದ ತಿರುಪತಿ ಪ್ರದೇಶಕ್ಕೆ ತೆರಳುತ್ತಿದ್ದ ರೈಲಿನಲ್ಲಿ ತಿರುವಲ್ಲೂರು ರೈಲು ನಿಲ್ದಾಣದ ಬಳಿ ಬೆಂಕಿ ಕಾಣಿಸಿಕೊಂಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಹತ್ತಿರದ ಪ್ರದೇಶಗಳ ಜನರನ್ನು ಸ್ಥಳಾಂತರಿಸಲಾಗಿದೆ. ಬೆಂಕಿಯ ಕಾರಣವನ್ನು ಇನ್ನೂ ತನಿಖೆ ನಡೆಸಲಾಗುತ್ತಿದೆ. ಘಟನೆಯಿಂದಾಗಿ ಚೆನ್ನೈಗೆ ಮತ್ತು ಅಲ್ಲಿಂದ ಹೊರಡುವ ರೈಲು ಸೇವೆಗಳಲ್ಲಿ ಅಡಚಣೆಯಾಗಿದೆ.