ಬೆಂಗಳೂರು: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ(ಜಿಬಿಎ) ಮೊದಲ ಸಭೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದಿದೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಬೆಂಗಳೂರಿನ ಶಾಸಕರು, ಜಿಬಿಎ ಅಡಿಯಲ್ಲಿ 5 ನಗರ ಪಾಲಿಕೆ ಆಯುಕ್ತರು, ಅಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಬೆಂಗಳೂರಿನ ಅಭಿವೃದ್ಧಿ, ಮೂಲ ಸೌಕರ್ಯ, ಕುಂದು ಕೊರತೆಗಳ ವಿಚಾರವಾಗಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ಬೆಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರಕ್ಕೆ ಇದ್ದ ನಕ್ಷೆ ಮಂಜೂರಾತಿ ಮತ್ತು ಟಿಡಿಆರ್(ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಗಳು) ನೀಡುವ ಅಧಿಕಾರವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಗೆ ತರಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಬಜೆಟ್ ತೀರ್ಮಾನ ಮಾಡುವ ಜೊತೆಗೆ ಬಿಎಂಟಿಸಿ ಮತ್ತು ಅಗ್ನಿಶಾಮಕ ದಳವನ್ನು ಸಹ ಸೇರಿಸಲು ನಿರ್ಣಯ ಕೈಗೊಳ್ಳಲಾಗಿದೆ.
ಬಿಡಿಎಗೆ ಇದ್ದ ನಕ್ಷೆ ಮಂಜೂರಾತಿ ಇನ್ನು ಮುಂದೆ ಜಿಬಿಎ ವ್ಯಾಪ್ತಿಗೆ ನೀಡಲಾಗಿದೆ. ಟಿಡಿಆರ್ ನೀಡುವ ಅಧಿಕಾರವನ್ನು ಕೂಡ ಜಿಬಿಎ ವ್ಯಾಪ್ತಿಗೆ ತರಲಾಗಿದೆ. 5 ಪಾಲಿಕೆಗಳ ಗಳಿಗೆ ಬಜೆಟ್ ತೀರ್ಮಾನ ಮಾಡುವ ಅಧಿಕಾರ, ಬಿಎಂಟಿಸಿ, ಅಗ್ನಿಶಾಮಕದಳ ಕೂಡ ಜಿಬಿಎ ವ್ಯಾಪ್ತಿಗೆ ಸೇರಿಸಲಾಗುವುದು.
5 ಪಾಲಿಕೆಗಳಿಗೆ 5 ಕಚೇರಿ ನಿರ್ಮಿಸಲಾಗುವುದು. ಸೆಂಟ್ರಲ್ ಪಾಲಿಕೆ ಜಿಬಿಎ ಕೇಂದ್ರ ಕಚೇರಿಯಲ್ಲಿ ಇರಲಿದೆ. ಹೊಸ ಪಾಲಿಕೆ ಕಚೇರಿ ಕಟ್ಟಡಗಳು ಒಂದೇ ರೀತಿ ಇರುವಂತೆ ನಿರ್ಮಿಸಲು ತೀರ್ಮಾನಿಸಲಾಗಿದೆ.