ರಾಯಚೂರು: ಕಲಿಯುಗದ ಕಾಮಧೇನು ಗುರುರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ ಮಂತ್ರಾಲಯದಲ್ಲಿ ವಿಜೃಂಭಣೆಯಿಂದ ನಡೆಯುತ್ತಿದೆ.
ಗುರುರಾಯರ ಆರಾಧನಾ ಮಹೋತ್ಸವ ಹಿನ್ನೆಲೆಯಲ್ಲಿ ಮಂತ್ರಾಲಯಕ್ಕೆ ಭಕ್ತಸಾಗರವೇ ಹರಿದು ಬರುತ್ತಿದೆ. ಶ್ರೀಕ್ಷೇತ್ರದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮ, ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಗುರುರಾಯರ 354ನೇ ಆರಾಧನಾ ಮಹೋತ್ಸವದ ಎರಡನೇ ದಿನವಾದ ಇಂದು ಮಂತ್ರಾಲಯದ ಮಠದಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದ್ದು, ಮೂಲ ವೃಂದಾವನಕ್ಕೆ ಶ್ರೀನಿವಾಸ ದೇವರ ಶೇಷವಸ್ತ್ರ ಸಮರ್ಪಿಸಲಾಗಿದೆ.
ಪ್ರತಿವರ್ಷದಂತೆ ಈ ವರ್ಷವೂ ತಿರುಪತಿ ತಿರುಮಲ ದೇವಾಲಯದಿಂದ ಶ್ರೀನಿವಾಸ ದೇವರ ಶೇಷವಸ್ತ್ರ ಮಂತ್ರಾಲಯಕ್ಕೆ ಆಗಮಿಸಿದ್ದು, ಮಠದ ಆಡಳಿತ ಮಂಡಳಿ ಅದ್ಧೂರಿಯಾಗಿ ಸ್ವಾಗತಿಸಿತು. ಮಂಚಾಲಮ್ಮದೇವಿಗೆ ಸೀರೆ ಸಮರ್ಪಣೆ ಬಳಿಕ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿಗಳು ಶೇಷವಸ್ತ್ರ ಸ್ವೀಕರಿಸಿ ಗುರುರಾಯರ ವೃಂದಾವನಕ್ಕೆ ಸಮರ್ಪಿಸಿದರು. ಇಂದು ಮುಂಜಾನೆಯಿಂದಲೇ ಮಠದಲ್ಲಿ ವಿಶೇಷ ಪೂಜೆ, ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆಯುತ್ತಿವೆ. ಸಾವಿರಾರು ಭಕ್ತರು ರಾಯರ ದರ್ಶನ ಪಡೆದು ಪುನೀತರಾಗಿತ್ತಿದ್ದಾರೆ.
ಇದೇ ವೇಳೆ ರಾಯರ ವೃಂದಾವನದ ಮುಂದಿನ ಎರಡು ಶಿಲಾ ಸ್ತಂಭಗಳಿಗೆ ಸುವರ್ಣ ಲೇಪಿತ ಕವಚ ಅಳವಡಿಸಲಾಗಿದೆ. ರಾಯರ ಭಕ್ತರ ದೇಣಿಗೆಯಿಂದ ತಯಾರಿಸಲಾದ ಚಿನ್ನದ ಲೇಪಿತ ಕವಚ ಇದೇ ಮೊದಲ ಬಾರಿಗೆ ಅಳವಡಿಸಲಾಗಿದೆ.
ಆಗಸ್ಟ್ 8ರಿಂದ ಆಗಸ್ಟ್ 14ರವರೆಗೆ ಮಂತ್ರಾಲಯದ ಗುರುರಾಯರ ಮಠದಲ್ಲಿ ಏಳುದಿನಗಳ ಕಾಲ ಸಪ್ತರಾತ್ರೋತ್ಸವ ಕಾರ್ಯಕ್ರಮ ನಡೆಯಿತ್ತಿದ್ದು, ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.