ರಾಯಚೂರು: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ಗುಂಡಿಟ್ಟು 26 ಪ್ರವಾಸಿಗರು ಹತ್ಯೆ ಮಾಡಿರುವ ಬೆನ್ನಲ್ಲೇ ದೇಶಾದ್ಯಂತ ಪ್ರಮುಖ ಸ್ಥಳಗಳಲ್ಲಿ, ಜನನಿಬಿಡ ಪ್ರದೇಶಗಳಲ್ಲಿ, ಪ್ರವಾಸಿ ತಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ.
ಅದೇ ರೀತಿ ಮಂತ್ರಾಲಯದ ಶ್ರೀ ರಾಘವೇಂದ್ರ ಮಾಸ್ವಾ ಮಠದ ಆವರಣದಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದ್ದು, ಮುಂಜಾಗೃತಾ ಕ್ರಮವಾಗಿ ಬಾಂಬ್ ಸ್ಕ್ವಾಡ್, ಶ್ವಾನದಳ, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಮಂತ್ರಾಲಯ ಮಠಕ್ಕೆ ಪ್ರತಿದಿನ ಲಕ್ಷಾಂತರ ಭಕ್ತರು ಆಗಮಿಸುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಅಲರ್ಟ್ ಆಗಿದ್ದು, ಮುನ್ನೆಚ್ಚರಿಕೆ ವಹಿಸಲಾಗಿದೆ. ಮಂತ್ರಾಲಯದಲ್ಲಿ ತೀವ್ರ ತಪಾಸಣೆ ನಡೆಸಲಾಗಿದೆ. ಮಠದ ಪ್ರಾಂಗಣ, ಭೋಜನ ಶಾಲೆ, ತುಂಗಭದ್ರಾ ನದಿ ತೀರ, ಬಸ್ ನಿಲ್ದಾಣ, ವ್ಯಾಪಾರಿ ಮಳಿಗೆಗಳು, ವಸತಿಗೃಹ, ಮಂತ್ರಾಲಯಕ್ಕೆ ಬರುವ ಬಸ್, ವಾಹನಗಳು, ಭಕ್ತರ ಬ್ಯಾಗ್ ಗಳನ್ನು ತಪಾಸಣೆ ನಡೆಸಲಾಯಿತು.
ಮಂತ್ರಾಲಯ ಮಠದಲ್ಲಿ ಭದ್ರತೆ ಬಿಗಿಗೊಳಿಸಲು ಮಠದ ಆಡಳಿತ ಮಂಡಳಿಗೂ ಸೂಚಿಸಲಾಗಿದೆ. ಮಂತ್ರಾಲಯಂ ಹಾಗೂ ಮಾಧವರಂ ಠಾಣೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.