ನವದೆಹಲಿ: ರಾಜ್ಯದ ಮಾವು ಬೆಳೆಗಾರರ ನೆರವಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಬೆಲೆ ಕುಸಿತದಿಂದ ಕಂಗಾಲಾಗಿರುವ ಮಾವು ಬೆಳೆಗಾರರ ಹಿತರಕ್ಷಣೆಗಾಗಿ ಕೇಂದ್ರ ಸರ್ಕಾರ ₹1616 ಕ್ವಿಂಟಲ್ ಬೆಂಬಲ ಬೆಲೆಯಲ್ಲಿ 2.5 ಲಕ್ಷ ಮೆಟ್ರಿಕ್ ಟನ್ ಮಾವು ಖರೀದಿಗೆ ಅನುಮೋದನೆ ನೀಡಿದೆ.
ಕರ್ನಾಟಕದಲ್ಲಿ ಮಾವು ಬೆಳೆಗಾರರು ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು ನೆರವಿಗೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಕ್ರಮಕ್ಕೆ ಮುಂದಾದ ಕೇಂದ್ರ ಕೃಷಿ ಸಚಿವರು, ರಾಜ್ಯದಲ್ಲಿ 2025-26ರ ಮಾರುಕಟ್ಟೆ ವರ್ಷಕ್ಕೆ ಮಾರುಕಟ್ಟೆ ಹಸ್ತಕ್ಷೇಪ ಯೋಜನೆ (MIS) ಅಡಿಯಲ್ಲಿ ಕ್ವಿಂಟಲ್‌ಗೆ ₹1616 ಬೆಂಬಲ ಬೆಲೆಯಲ್ಲಿ ಗರಿಷ್ಠ 2,50,000 ಮೆಟ್ರಿಕ್ ಟನ್‌ಗಳಷ್ಟು ಮಾವು ಖರೀದಿಗೆ ಅನುಮೋದನೆ ನೀಡಿದ್ದಾರೆ. ಅಲ್ಲದೇ ಈ ಸಂಬಂಧ ಸಚಿವ ಪ್ರಲ್ಹಾದ ಜೋಶಿ ಅವರಿಗೂ ಪತ್ರ ಬರೆದು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಮಾವು ಬೆಳೆಗಾರರ ಸಂಕಷ್ಟ ಅರಿತು ತಕ್ಷಣವೇ ಸ್ಪಂದಿಸಿದ್ದಾರೆ. ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್ ಚೌಹಾಣ್ ಅವರು ತ್ವರಿತವಾಗಿ ಬೆಂಬಲ ಬೆಲೆ ಘೋಷಿಸಿ ಮಾವು ಖರೀದಿಗೆ ಅವಕಾಶ ಕಲ್ಪಿಸಿದ್ದಾರೆ. ಇದಕ್ಕಾಗಿ ಇಬ್ಬರು ನಾಯಕರಿಗೆ ಸಚಿವ ಪ್ರಲ್ಹಾದ ಜೋಶಿ ಧನ್ಯವಾದ ತಿಳಿಸಿದ್ದಾರೆ.