ಮಂಡ್ಯ: ಮಂಡ್ಯ ಜಿಲ್ಲೆಯ ಮದ್ದೂರಿನ ಹೊಂಬಾಳೆಗೌಡನ ದೊಡ್ಡಿ ಗ್ರಾಮದಲ್ಲಿ ಮನೆಯೊಂದರಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ. ಮನೆಯ ತುಂಬೆಲ್ಲ ರಕ್ತ ಚಲ್ಲಿದ್ದು, ಹಲವು ಅನುಮಾನಕ್ಕೆ ಕಾರಣವಾಗಿದೆ.
ಹೊಂಬ್ವಾಳೆಗೌಡನ ದೊಡ್ದಿ ಗ್ರಾಮದ ಸತೀಶ್ ದಂಪತಿ ಎಂಬುವವರ ಮನೆಯ ಹಾಲ್, ಬಾತ್ ರೂಂ, ಮನೆಯ ಆವರಣ, ಮನೆಯಲ್ಲಿದ್ದ ಟಿವಿ, ಫ್ಯಾನ್ ಗಳು ಸೇರಿದಂತೆ ಎಲ್ಲೆಡೆ ರಕ್ತ ಬಿದ್ದಿದೆ. ಮನೆ ತುಂಬೆಲ್ಲ ಕಂಡುಬರುತ್ತಿರುವ ರಕ್ತದ ಕಲೆಗಳು ಗ್ರಾಮಸ್ಥರಲ್ಲಿ ಆತಂಕ, ಅನುಮಾನ ಮೂಡಿಸಿದೆ.
ಮನೆಗೆ ದೌಡಾಯಿಸಿರುವ ಸೋಕೋ ಟೀಂ ಪರಿಶೀಲನೆ ನಡೆಸಿದೆ. ಈ ನಡುವೆ ರಕ್ತದ ಕಲೆಗಳ ಬಗ್ಗೆ ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ. ಲ್ಯಾಬ್ ವರದಿ ಪ್ರಕಾರ ಮನೆಯಲ್ಲಿ ಬಿದ್ದಿರುವ ರಕ್ತದ ಕಲೆಗಳು ಮನುಷ್ಯನದ್ದು ಎಂದು ದೃಢಪಡಿಸಿದೆ. ಇನ್ನು ಎಫ್ ಎಸ್ ಎಲ್ ವರದಿಗಾಗಿ ಕಾಯಲಾಗುತ್ತಿದೆ.
ಮನೆಯಲ್ಲಿ ಇಷ್ಟೆಲ್ಲ ಮನುಷ್ಯನ ರಕ್ತದ ಕಲೆಗಳು ಹೇಗೆ ಬಂತು? ಅದು ಯಾರ ರಕ್ತ? ಈ ರೀತಿ ಎಲ್ಲೆಂದರಲ್ಲಿ ಮನೆಯ ತುಂಬೆಲ್ಲ ರಕ್ತದ ಕಲೆ ಕಾಣಲು ಕಾರಣವೇನು? ಎಂದು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸತೀಸ್ ಹಾಗೂ ಪತ್ನಿ ತಮ್ಮ ಇಬ್ಬರು ಮಕ್ಕಳನ್ನು ಬೆಂಗಳೂರಿನಲ್ಲಿ ವಿದ್ಯಾಭ್ಯಾಸಕ್ಕೆ ಸೇರಿಸಿದ್ದು, ಮನೆಯಲ್ಲಿ ದಂಪತಿ ಇಬ್ಬರೇ ವಾಸವಾಗಿದ್ದಾರೆ. ಸೋಮವಾರ ಬೆಳಿಗ್ಗೆ ಸತೀಶ್ ಪತ್ನಿ ಮನೆ ಸ್ವಚ್ಛಗೊಳಿಸಿ ಉಪಹಾರ ತಯಾರಿಸಲು ಅಡುಗೆ ಮನೆಗೆ ತೆರಳಿದ್ದರು. ಕೆಲವೇ ಕ್ಷಣಗಳಲ್ಲಿ ಮನೆಯ ಹಾಲ್, ಬಾತ್ ರೂಂ, ಟಿವಿ, ಫ್ಯಾನ್ ಗಳ ಮೇಲೆ ರಕ್ತದ ಕಲೆಗಳು ಕಾಣಿಸಿಕೊಂಡಿವೆ. ಇದನ್ನು ಕಂಡು ಬೆಚ್ಚಿ ಬಿದ್ದಿರುವ ದಂಪತಿ ತಕ್ಷಣ ಪೊಲೀಸರುಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಬೆಸಗರಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಎಫ್ ಎಸ್ ಎಲ್ ತಂಡ ಕೂಡ ಸ್ಥಳದಲ್ಲಿ ಪರಿಶೀಲಿಸಿ ಮಾದರಿ ಸಂಗ್ರಹಿಸಿದೆ. ಎಫ್ ಎಸ್ ಎಲ್ ವರದಿ ಬಳಿಕ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ.
