ಹೆಂಡತಿ ಮನೆ ಬಿಟ್ಟು ಹೋಗಿದ್ದಕ್ಕೆ ಕೋಪಗೊಂಡ ಗಂಡ ತನ್ನ 10 ವರ್ಷದ ನಾದಿನಿಯನ್ನೇ ಹತ್ಯೆಗೈದು ಚರಂಡಿಗೆ ಬಿಸಾಕಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ.
ಹೆಂಡತಿ ಮನೆ ಬಿಟ್ಟು ಹೋಗಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಮೋಹಿತ್ ಕುಮಾರ್ ಎಂಬಾತ, ನಾದಿನಿಯನ್ನು ಕೊಲೆಗೈದಿದ್ದಾನಂತೆ. ಪತ್ನಿಯ 10 ವರ್ಷದ ಪುಟ್ಟ ತಂಗಿಯನ್ನು ಬರ್ಬರವಾಗಿ ಕೊಲೆಗೈದು ಶವವನ್ನು ಚೀಲದಲ್ಲಿ ತುಂಬಿ ಶಾಲು ಸುತ್ತಿ, ಬಜ್ಗೇರಾ ಬಳಿ ಚರಂಡಿಗೆ ಎಸೆದಿದ್ದಾನೆ.
ತನ್ನ ಕಿರಿಯ ಮಗಳು ಕಾಣೆಯಾಗಿದ್ದಾಳೆ ಎಂದು ಪಾಲಂ ವಿಹಾರ್ ಠಾಣೆಯಲ್ಲಿ ಬಾಲಕಿ ತಂದೆ ದೂರು ನೀಡಿದ್ದರು. ಪೊಲೀಸರು ಹುಡುಕಾಟ ನಡೆಸಿದರೂ ಬಾಲಕಿ ಪತ್ತೆಯಾಗಿಲ್ಲ. ತಂದೆಯನ್ನು ವಿಚಾರಿಸಿದಾಗ ತನ್ನ ಹಿರಿಯ ಮಗಳು ಹಾಗೂ ಅಳಿಯನ ನಡುವೆ ಜಗಳವಾಗಿ ಆಕೆ ಮನೆ ಬಿಟ್ಟು ಬಂದಿದ್ದಾಳೆ ಎಂದು ಹೇಳಿದ್ದಾರೆ. ಈ ವೇಳೆ ಅಳಿಯ ಮೋಹಿತ್ ಕುಮಾರ್ ನನ್ನು ಪೊಲೀಸರು ಬಂಧಿಸಿ ವಿಚಾರಿಸಿದಾಗ ಬಾಲಕಿಯನ್ನು ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ತನಗೆ ವಿವಾಹವಾಗಿ 6 ವರ್ಷವಾಗಿದ್ದು, ಒಂದು ಮಗು ಕೂಡ ಇದೆ. ಆದರೂ ತನ್ನ ಹೆಂಡತಿ ಜಗಳವಾಡಿ ಮನೆ ಬಿಟ್ಟು ಹೋಗಿದ್ದಾಳೆ ಅದಕ್ಕೆ ಸೇಡು ತೀರಿಸಿಕೊಳ್ಳಲು ಆಕೆಯ ತಂಗಿಯನ್ನು ಹತ್ಯೆ ಮಾಡಿದ್ದೇನೆ ಎಂದಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.