ಕಳೆದ ಗುರುವಾರ ಇರಾಕ್‌ನ ಕೂಫಾದಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಅಖಿಲ್ ಫಖರ್ ಅಲ್-ದಿನ್ ಎಂಬ 50 ವರ್ಷದ ವ್ಯಕ್ತಿಯೊಬ್ಬರು ತಾವು ಸಾಕಿದ್ದ ಸಿಂಹದ ದಾಳಿಗೆ ಬಲಿಯಾಗಿದ್ದಾರೆ. ಅಲ್-ಬರಾಕಿಯಾ ಜಿಲ್ಲೆಯ ಜನರು ಈ ಘಟನೆಯಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಅಲ್-ಹಸಿನಾತ್ ಪ್ರದೇಶದಲ್ಲಿರುವ ತಮ್ಮ ಮನೆಯ ಹಿತ್ತಲಿನಲ್ಲಿ ಅಲ್-ದಿನ್ ಹಲವು ವರ್ಷಗಳಿಂದ ಸಿಂಹಗಳು ಮತ್ತು ಇತರ ಕಾಡು ಪ್ರಾಣಿಗಳನ್ನು ಸಾಕುತ್ತಿದ್ದರು. ಹೊಸದಾಗಿ ತಂದಿದ್ದ ಸಿಂಹವನ್ನು ಪಳಗಿಸುವ ಪ್ರಯತ್ನದಲ್ಲಿದ್ದಾಗಲೇ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಅಲ್-ಘದ್ ಪತ್ರಿಕೆಯ ವರದಿಗಳ ಪ್ರಕಾರ, ಅಲ್-ದಿನ್ ಸಿಂಹದ ಪಂಜರದ ಬಳಿ ಹೋದಾಗ ಅದು ಹಠಾತ್ ದಾಳಿ ಮಾಡಿದೆ. ಸಿಂಹವು ಅವರ ಕುತ್ತಿಗೆ ಮತ್ತು ಎದೆಗೆ ಕಚ್ಚಿದ್ದರಿಂದ ತೀವ್ರ ರಕ್ತಸ್ರಾವವಾಗಿ ತಕ್ಷಣವೇ ಅವರು ಮೃತಪಟ್ಟಿದ್ದಾರೆ. ನಂತರ ಸಿಂಹವು ಅವರ ದೇಹದ ಬಹುಭಾಗವನ್ನು ತಿಂದಿದೆ ಎಂದು ಹೇಳಲಾಗಿದೆ. ಅಲ್-ದಿನ್ ಅವರು ಕಾಡು ಪ್ರಾಣಿಗಳನ್ನು ಸಾಕುವುದು ಅವರ ಹವ್ಯಾಸವಾಗಿತ್ತು ಮತ್ತು ಈ ವಿಷಯದಲ್ಲಿ ಅವರು ಆ ಪ್ರದೇಶದಲ್ಲಿ ಪರಿಚಿತರಾಗಿದ್ದರು.
ಭದ್ರತಾ ಮೂಲವೊಂದು ತಿಳಿಸಿರುವಂತೆ, ಅಖಿಲ್ ಫಖರ್ ಅಲ್-ದಿನ್ ಸುಮಾರು ಒಂದು ತಿಂಗಳಿನಿಂದ ಈ ಸಿಂಹವನ್ನು ತಮ್ಮ ಮನೆಯ ಹಿತ್ತಲಿನಲ್ಲಿ ಸಾಕುತ್ತಿದ್ದರು. ಅವರು ಪಂಜರದ ಸಮೀಪಕ್ಕೆ ಹೋದಾಗ, ಸಿಂಹವು ಅವರ ಮೇಲೆ ಎರಗಿ, ತನ್ನ ಕೋರೆಹಲ್ಲುಗಳಿಂದ ಕಚ್ಚಿ ಎಳೆದಿರುವ ಪರಿಣಾಮವಾಗಿ ತೀವ್ರ ಗಾಯಗಳಾಗಿ ತಕ್ಷಣವೇ ಅವರು ಸಾವನ್ನಪ್ಪಿದರು. “ಕುಟುಂಬದವರ ಕಿರುಚಾಟ ಮತ್ತು ಸಹಾಯಕ್ಕಾಗಿ ಮೊರೆಯುವ ಕೂಗು ಕೇಳಿದ ನೆರೆಹೊರೆಯ ವ್ಯಕ್ತಿಯೊಬ್ಬರು ತಕ್ಷಣವೇ ಮಧ್ಯಪ್ರವೇಶಿಸಿ ತಮ್ಮಲ್ಲಿದ್ದ ಬಂದೂಕಿನಿಂದ ಸಿಂಹಕ್ಕೆ ಗುಂಡಿಕ್ಕಿ ಕೊಂದರು. ಇದರಿಂದ ಆ ಭೀಕರ ದಾಳಿ ಕೊನೆಗೊಂಡಿತು” ಎಂದು ಮೂಲಗಳು ತಿಳಿಸಿವೆ.
ಮೃತದೇಹವನ್ನು ವಿಧಿವಿಜ್ಞಾನ ಇಲಾಖೆಗೆ ರವಾನಿಸಲಾಗಿದೆ. ಘಟನೆಯ ನಂತರ ಸಿಂಹವು ರಕ್ತದ ಮಡುವಿನಲ್ಲಿ ಬಿದ್ದಿರುವ ವೀಡಿಯೊ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಈ ಘಟನೆಯು ಇರಾಕ್‌ನಲ್ಲಿ ಯಾವುದೇ ಕಾನೂನು ಚೌಕಟ್ಟು ಅಥವಾ ಪಶುವೈದ್ಯಕೀಯ ಮೇಲ್ವಿಚಾರಣೆ ಇಲ್ಲದೆ ವಸತಿ ಪ್ರದೇಶಗಳಲ್ಲಿ ಅಪಾಯಕಾರಿ ಪ್ರಾಣಿಗಳನ್ನು ಸಾಕುವ ಹೆಚ್ಚುತ್ತಿರುವ ಪ್ರವೃತ್ತಿಯನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ. ಇದು ಸಾರ್ವಜನಿಕ ಸುರಕ್ಷತೆಗೆ ನೇರ ಬೆದರಿಕೆಯೊಡ್ಡುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.